ಮಂಗಳೂರು, ಮೇ 15 (Daijiworld News/SM): ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನ ಚಾಲಕರ ಚಾಲನಾ ಪರವಾನಗಿಗಳನ್ನು ಅಮಾನತುಗೊಳಿಸುವ ಕುರಿತಂತೆ ಸುಪ್ರೀಂಕೋರ್ಟ್ ನ ರಸ್ತೆ ಸುರಕ್ಷತಾ ಸಮಿತಿಯ ಸೂಚನೆಗಳನ್ನು ಪಾಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಇಲಾಖೆ ಮುಂದಾಗಿದೆ.

ದೇಶದಲ್ಲಿ ಹೆಚ್ಚುತ್ತಿರುವ ಸಂಚಾರ ನಿಯಮಗಳ ಉಲ್ಲಂಘನೆಗಳನ್ನು ಗಮನಿಸಿ ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮಕ್ಕೆ ತೀರ್ಮಾನಿಸಿ, ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ಚಾಲನಾ ಪರವಾನಗಿಗಳನ್ನು ಕನಿಷ್ಟ 3 ತಿಂಗಳ ಅವಧಿಗೆ ರದ್ದು ಮಾಡಲು ಸೂಚಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯ್ದೆ 1988 ಉಲ್ಲಂಘನೆ ಮಾಡುವ ವಾಹನ ಚಾಲಕರ ವಿರುದ್ಧ ಸೆಕ್ಷನ್ 19 ಮತ್ತು ಕೇಂದ್ರ ಮೋಟಾರ್ ವಾಹನ ನಿಯಮ 1989 ರ ರೂಲ್ 21ರ ಅಡಿಯಲ್ಲಿ ಕ್ರಮ ಕೈಗೊಂಡು ಕಡ್ಡಾಯವಾಗಿ ಅಂತಹ ವಾಹನ ಚಾಲಕರ ಚಾಲನಾ ಪರವಾನಗಿಗಳನ್ನು ಅಮಾನತಿನಲ್ಲಿರಿಸಲು ಸಂಬಂಧಪಟ್ಟ ಸಾರಿಗೆ ಅಧಿಕಾರಿಯವರಿಗೆ ವರದಿ ಸಲ್ಲಿಸಲು ತಿರ್ಮಾನಿಸಲಾಗಿದೆ.
ಸಾರ್ವಜನಿಕರು ಅತಿ ವೇಗದ ಚಾಲನೆ, ಗೂಡ್ಸ್ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ ಭಾರ ಮತ್ತು ಜನರನ್ನು ಹೊತ್ತು ಸಾಗಿಸುವುದು, ಮದ್ಯಪಾನ ಮಾಡಿ ಮತ್ತು ಮಾದಕ ದ್ರವ್ಯ ಸೇವನೆ ಮಾಡಿ ವಾಹನವನ್ನು ಚಲಾಯಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ಫೋನಿನಲ್ಲಿ ಮಾತನಾಡುವುದು, ಕೆಂಪು ದೀಪವನ್ನು ದಾಟಿ ವಾಹನವನ್ನು ಚಲಾಯಿಸುವುದು ಹೀಗೆ ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲೆ ಪೊಲೀಸ್ ಅಧೀಕ್ಷಕರು ತಿಳಿಸಿರುತ್ತಾರೆ.