ಉಡುಪಿ, ಮಾ25(SS): ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಹಾಗೂ 7 ಮಂದಿ ಮೀನುಗಾರರ ನಾಪತ್ತೆಗೆ ನೌಕಾ ಸೇನೆಯೇ ಕಾರಣ ಎಂದು ಉಡುಪಿ - ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ ಮಾಡಿದ್ದಾರೆ.

ಉಡುಪಿಯ ಡಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮಲ್ಪೆಯ ಮೀನುಗಾರರು ನಾಪತ್ತೆಯಾಗಿ ನಾಲ್ಕು ತಿಂಗಳು ಕಳೆದಿವೆ. ಆದರೆ ನೌಕಾಸೇನೆ ಈಗಲೂ ಹುಡುಕುವ ನಾಟಕ ಮಾಡುತ್ತಿದೆ. ಸುವರ್ಣ ತ್ರಿಭುಜ ಬೋಟ್ ಹಾಗೂ 7 ಮಂದಿ ಮೀನುಗಾರರ ನಾಪತ್ತೆಗೆ ನೌಕಾ ಸೇನೆಯೇ ಕಾರಣ ಎಂದು ದೂರಿದರು.
ಮೀನುಗಾರರು ಬದುಕಿದ್ದಾರೋ, ಸತ್ತಿದ್ದಾರೋ ಗೊತ್ತಿಲ್ಲ. ಚುನಾವಣೆವರೆಗೆ ಸತ್ಯ ಮರೆಮಾಚುವ ಪ್ರಯತ್ನ ಇದಾಗಿದೆ. ಈವರೆಗೆ ಮೀನುಗಾರ ಸಮುದಾಯಕ್ಕೆ ಕೇಂದ್ರ ಸರ್ಕಾರ ಏನೂ ಮಾಡಿಲ್ಲ. ಮೀನುಗಾರ ಅವಘಡದಲ್ಲಿ ಬಲಿಯಾದ್ರೆ ಕೇವಲ ಎರಡು ಲಕ್ಷ ಪರಿಹಾರ ಕೊಡುತ್ತಾರೆ. ಆದರೆ ನಾವು ಅದನ್ನು ಹೆಚ್ಚಿಸಿದ್ದೇವೆ. ಇದೀಗ ನೊಂದ ಮನೆಯವರ ನೋವಿಗೆ ಯಾರು ಉತ್ತರಿಸುತ್ತಾರೆ ಎಂದು ಪ್ರಶ್ನಿಸಿದರು.
7 ಮಂದಿ ಮೀನುಗಾರರ ನಾಪತ್ತೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಬೇಕು. ಶೋಭಾ ನಾಮಪತ್ರ ಸಲ್ಲಿಸುವಾಗ ನಿರ್ಮಲಾ ಸೀತಾರಾಮನ್ ಬರುತ್ತಾರಂತೆ. ಮೀನುಗಾರರು ಕಾಣೆಯಾದ ಪ್ರಕರಣ ಏನಾಯ್ತು ಎಂದು ರಕ್ಷಣಾ ಸಚಿವರೇ ತಿಳಿಸಬೇಕು ಎಂದು ಹೇಳಿದರು.