ಬಂಟ್ವಾಳ, ಮಾ 02(SM): ಆರ್.ಎಸ್.ಎಸ್.ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯೋರ್ವ ಬಿ.ಸಿ.ರೋಡಿನ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ. ಕಲಂದರ್ ನಿಶಾರ್ ನ್ಯಾಯಾಲಯಕ್ಕೆ ಹಾಜರಾದಾತ.

ಶರತ್ ಮಡಿವಾಳ ಆರೋಪಿ ಕಲಂದರ್
2017 ಜುಲೈ 4 ರಂದು ಶರತ್ ಮಡಿವಾಳ ಅವರು ತಮ್ಮ ಲಾಂಡ್ರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರಾತ್ರಿ ಸುಮಾರು 10 ಗಂಟೆಗೆ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕಡಿದು ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಹೊರಳಾಡುತ್ತಿದ್ದ ಶರತ್ ಮಡಿವಾಳ ಅವರನ್ನು ಬಳಿಕ ಇವರ ಸ್ನೇಹಿತರು ಸೇರಿ ಆಸ್ಪತ್ರೆ ಗೆ ದಾಖಲು ಮಾಡಿದ್ದರು.
ಜೀವನ್ಮರಣ ಹೋರಾಟದಲ್ಲಿದ್ದ ಶರತ್ ಜುಲೈ 7 ರಂದು ಮೃತಪಟ್ಟಿದ್ದರು. ಬಳಿಕ ಕರಾವಳಿಯಲ್ಲಿ ಒಂದಿಷ್ಟು ಘಟನೆಗಳು, ನಿಷೇಧಾಜ್ಞೆ ಕೂಡ ಜಾರಿಯಾಗಿತ್ತು. ಶರತ್ ಹತ್ಯೆ ಯಲ್ಲಿ ಸಜೀಪ ನಿವಾಸಿ ಕಲಂದರ್ ನಿಶಾರ್, ನಂದಾವರ ನಿವಾಸಿ ಇಬ್ರಾಹಿಂ ಹಾಗೂ ಮಹಮ್ಮದ್ ಶರೀಫ್ ಅವರು ಪ್ರಮುಖ ಆರೋಪಿಗಳಾಗಿದ್ದರು. ಇವರಲ್ಲಿ ಮಹಮ್ಮದ್ ಶರೀಫ್ ಅವರ ಜೊತೆ ಇವರಿಗೆ ಸಹಾಯ ಮಾಡಿದ 18 ಜನರ ನ್ನು ಸುದೀರ್ ರೆಡ್ಡಿ ಅವರ ನೇತ್ರತ್ವದಲ್ಲಿ ಬಂಧನ ಮಾಡಲಾಗಿತ್ತು.
ಉಳಿದಂತೆ ಪ್ರಮುಖ ಆರೋಪಿಗಳ ಪೈಕಿ ನಂದಾವರ ನಿವಾಸಿ ಇಬ್ರಾಹಿಂ ವಿದೇಶಕ್ಕೆ ಪರಾರಿಯಾಗಿದ್ದ ಸಜೀಪ ನಿವಾಸಿ ಕಲಂದರ್ ನಿಶಾರ್ ತಲೆಮರೆಸಿಕೊಂಡು ತಿರುಗಾಡುತ್ತಿದ್ದ, ಇದೀಗ ಕೊನೆಗೂ ಕಲಂದರ್ ನ್ಯಾಯಾಲಯಕ್ಕೆ ಶುಕ್ರವಾರದಂದು ಹಾಜರಾಗಿದ್ದಾನೆ.