ಉಡುಪಿ, ಡಿ 23 (MSP): ನಗರದ ವೈಟ್ ಲೋಟಸ್ ಹೊಟೇಲಿನ ಮುಂಭಾಗ ಪಾರ್ಕ್ ಮಾಡಲಾಗಿದ್ದ ಬೀದರ್ ಬಸವ ಕಲ್ಯಾಣದ ನಿವಾಸಿಯ ಗಣೇಶ್ ಎಂಬವರ ಕಾರು ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿಯ ಕೆನ್ನಾಲಗೆ ಸಿಲುಕಿ ಸಂಪೂರ್ಣ ಭಸ್ಮವಾದ ಘಟನೆ ಡಿ 23ರ ಭಾನುವಾರ ನಡೆದಿದೆ. ಇವರು ಪ್ರವಾಸಕ್ಕೆಂದು ಉಡುಪಿಗೆ ಆಗಮಿಸಿದ ಪ್ರವಾಸಿಗರನ್ನು ಕರೆತಂದಿದ್ದರು.



ಪ್ರವಾಸಿಗರು ಹೊಟೇಲ್ ನಲ್ಲಿ ಉಳಿದುಕೊಂಡಿದ್ದು, ಕಾರು ಚಾಲಕ ಮಾತ್ರ ಕಾರಿನಲ್ಲಿ ಮಲಗಿದ್ದರು. ಆದರೆ ಭಾನುವಾರ ಮುಂಜಾನೆ 4 ಗಂಟೆಗೆ ಕಾರಿನ ಹಿಂಬಾಗ ಬೆಂಕಿ ಕಾಣಿಸಿಕೊಂಡದ್ದನ್ನು ಗಮನಿಸಿದ ಚಾಲಕ ತಕ್ಷಣವೇ ಕಾರಿನಿಂದ ಹೊರ ಬಂದು ಬೆಂಕಿ ನಂದಿಸಲು ಪ್ರಯತ್ನ ಪಟ್ಟರು. ಆದರೆ ಆದಾಗಲೇ ಕಾರಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಹೊಟೇಲ್ ಸಿಬ್ಬಂದಿ ಅಗ್ನಿಶಾಮಕ ಕಚೇರಿಗೆ ಮಾಹಿತಿ ತಿಳಿಸಿದ್ದಾರೆ .ಅವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು, ಆದರೆ ಅದಾಗಲೇ ಕಾರು ಸಂಪೂರ್ಣ ಹೊತ್ತಿ ಉರಿದಿತ್ತು.
ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಹೊಟೇಲ್ ಬಳಿ ಇದ್ದ ಬ್ಯಾಂಕ್ ನ ನಾಮಫಲಕಕ್ಕೂ ಹಾನಿ ಆಗಿದೆ.