ಉಡುಪಿ, ನ.12 (DaijiworldNews/HR): ಜಿಲ್ಲೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಸಾರ್ವಜನಿಕರು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ.
ಸರ್ಕಾರದ ಆದೇಶದಂತೆ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಹಸಿರು ಪಟಾಕಿಗಳನ್ನು ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಹಚ್ಚಬೇಕು. ಸಂಬಂಧಪಟ್ಟ ಇಲಾಖೆ ಪ್ರಾಧಿಕಾರಗಳಿಂದ ಅಧಿಕೃತ ಪರವಾನಿಗೆಯನ್ನು ಪಡೆದ ಮಾರಾಟಗಾರರು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬಹುದಾಗಿದೆ.
ಕೊರೊನಾ ರೋಗದ ಹಿನ್ನೆಲೆಯಲ್ಲಿ ಸುಡುಮದ್ದು ಮಾರಾಟ ಮಾಡುವ ಮಳಿಗೆಯ ಸುತ್ತಮುತ್ತ ಪ್ರತಿನಿತ್ಯ ಸ್ಯಾನಿಟೈಸೇಷನ್ ಮಾಡಬೇಕು ಹಾಗೂ ಪಟಾಕಿ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಬೇಕು.
ಪಟಾಕಿ ಖರೀದಿಸುವಾಗ ಮಾರಾಟಗಾರರು ಮತ್ತು ಸಾರ್ವಜನಿಕರು ಮುಖಗವಸು ಧರಿಸಬೇಕು ಮತ್ತು 6 ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಜನದಟ್ಟಣೆಯಾಗದಂತೆ ನೋಡಿಕೊಳ್ಳಬೇಕು.
ಜಿಂಕ್ ಶೀಟ್ ಅಥವಾ ಅಗ್ನಿ ನಿರೋಧಕ ವಸ್ತುಗಳಿಂದ ಮಳಿಗೆ ನಿರ್ಮಿಸಬೇಕು. ಒಂದು ಮಳಿಗೆಯಿಂದ ಇನ್ನೊಂದು ಮಳಿಗೆಗೆ ಕನಿಷ್ಟ 6 ಮೀಟರ್ ಅಂತರವನ್ನು ಹೊಂದಿರಬೇಕು. ಮಳಿಗೆಯ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿಯೂ ಪ್ರವೇಶ ದ್ವಾರವಿರಬೇಕು ಹಾಗೂ ಮಳಿಗೆಯ ಮುಂಭಾಗದಲ್ಲಿ ಅಗ್ನಿ ಶಾಮಕ ವಾಹನಗಳು ಓಡಾಡುವಂತೆ ಮತ್ತು ಸಾರ್ವಜನಿಕರು ಸರಾಗವಾಗಿ ಹೋಗುವಂತಿರಬೇಕು.
ಪಟಾಕಿಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯ ವರೆಗೆ ಮಾತ್ರ ಮಾರಾಟ ಮಾಡಬೇಕು. ಮಳಿಗೆಗಳಲ್ಲಿ ವಿದ್ಯುತ್ ವಯರಿಂಗ್ ಪೈಪ್ ಮೂಲಕ ಅಳವಡಿಸಬೇಕು. ಅಲಂಕಾರಿಕ ವಿದ್ಯುತ್ ಸೀರಿಯಲ್ ಸೆಟ್ಗಳನ್ನು ಹಾಕಬಾರದು. ಮಳಿಗೆಗಳಲ್ಲಿ ಅಡುಗೆ ಮಾಡುವುದಾಗಲೀ, ಗ್ಯಾಸ್, ಕ್ಯಾಂಡಲ್ ಮತ್ತು ಅಗರ್ಬತ್ತಿಗಳನ್ನು ಉರಿಸುವುದಾಗಲೀ ಮಾಡಬಾರದು.
ಪರವಾನಿಗೆ ಅವಧಿ ಮುಗಿದ ನಂತರ ಉಳಿದಿರುವ ಸುಡುಮದ್ದುಗಳನ್ನು ಮನೆಗೆ ಕೊಂಡೊಯ್ಯದೇ ಅವುಗಳನ್ನು ಅಧಿಕೃತ ಸಗಟು ಮಾರಾಟಗಾರರಿಗೆ ಹಿಂದಿರುಗಿಸಬೇಕು.
ಪರವಾನಿಗೆ ಅವಧಿ ನಂತರ ಮಳಿಗೆಯಲ್ಲಿ ಉಳಿದ ತ್ಯಾಜ್ಯವನ್ನು ಸುಡುಮದ್ದುಗಳಿಂದ ಬೇರ್ಪಡಿಸಿ ಕಾಗದ, ಪ್ಲಾಸ್ಟಿಕ್ಗಳನ್ನು ಹತ್ತಿರದ ತ್ಯಾಜ್ಯ ವಿಲೇವಾರಿ ಸಂಗ್ರಹಣಾ ಸ್ಥಳಕ್ಕೆ ಸಾಗಿಸಬೇಕು.
ಈ ಮೆಲ್ಕಂಡ ನಿಯಮ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಶಿಸ್ತಿನ /ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.