ಮಂಗಳೂರು, ಮೇ 11(Daijiworld News/MSP): ಫಸ್ಟ್ ನ್ಯೂರೋ ಆಸ್ಪತ್ರೆಗೆ ಬಂದು ಹೋದ ರೋಗಿಯ ಸಂಪರ್ಕದಿಂದ ಮತ್ತೆ ಭಟ್ಕಳದಲ್ಲಿ ಭಾನುವಾರ ಏಳು ಕೊರೊನಾ ಪ್ರಕರಣ ದೃಢವಾಗಿದೆ. ಆದರೆ ದ.ಕ ಜಿಲ್ಲೆಯಲ್ಲಿ ಮತ್ತು ಉತ್ತರ ಕನ್ನಡದ ಭಟ್ಕಳದಲ್ಲಿ ಕೊರೊನಾ ಹರಡಲು ಕಾರಣವಾದ ಸೋಂಕಿನ ಮೂಲ ಇನ್ನು ನಿಗೂಢವಾಗಿಯೇ ಉಳಿದಿದೆ.

ಈ ಬಗ್ಗೆ ಸೋಂಕಿನ ಮೂಲ ಪತ್ತೆ ಹಚ್ಚುವಂತೆ ದ.ಕ ಜಿಲ್ಲಾಡಳಿತ ಆರೋಗ್ಯ ಇಲಾಖೆಗೆ ಸೂಚನೆ ನೀಡಿತ್ತು. ಈ ತನಿಖಾ ವರದಿ ಭಾನುವಾರ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೇಳಿದ್ದರು.
ಆದರೆ ಸೋಂಕುಪೀಡಿತರ ಪ್ರಾಥಮಿಕ ಸಂಪರ್ಕ ಹೊಂದಿದವರ ಇನ್ನೊಂದು ಪರೀಕ್ಷಾ ವರದಿ ಬರಲು ಇನ್ನೂ ಎರಡು ದಿನ ಬೇಕಾಗಬಹುದು ಆ ಬಳಿಕ ತನಿಖಾ ಸಮಿತಿ ಮತ್ತು ಅಧಿಕಾರಿಗಳು ಇನ್ನೊಂದು ಸುತ್ತಿನ ಸಭೆ ಸೇರಿಸಿ ಚರ್ಚಿಸಿ ಬಳಿಕ ಪರೀಕ್ಷಾ ವರದಿಯನ್ನು ಗಣನೆಗೆ ತೆಗೆದುಕೊಂಡು ಕೊರೊನಾ ಹರಡುವಿಕೆ ಮೂಲದ ಬಗ್ಗೆ ವರದಿ ಸಲ್ಲಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.