ವಿಟ್ಲ, ಮಾ.26 (Daijiworld News/MB) : ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ವೈರಸ್ ಕುರಿತಾಗಿ ಕೋಮು ಪ್ರಚೋದಕ ಪೋಸ್ಟ್ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬಂಧಿತ ಆರೋಪಿ ವಿಟ್ಲ ಕಸಬಾ ಗ್ರಾಮದ ಕೂಜಪ್ಪಾಡಿ ನಿವಾಸಿ ಜಯಕರ ಆಚಾರ್ಯ.
ಜಯಕರ ಆಚಾರ್ಯ ವಿರುದ್ಧ ವಿಟ್ಲ ಮುಸ್ಲಿಮ್ ಒಕ್ಕೂಟದ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ ಪೊಲೀಸ್ ಠಾಣೆಗೆ ಫೇಸ್ಬುಕ್ ಸ್ಕ್ರೀನ್ ಶಾಟ್ ನೀಡಿ ದೂರು ನೀಡಿದ್ದು ಪೊಲೀಸರು ಬಂಧನ ಮಾಡಿದ್ದಾರೆ.
ಹಾಗೆಯೇ ಈ ಪಕ್ರರಣಕ್ಕೆ ಸಂಬಂಧಿಸಿ, ಪ್ರಚೋದನಕಾರಿ ಪೋಸ್ಟ್ ಹಾಕಿದ ವಿಟ್ಲ ಮೇಗಿನಪೇಟೆ ಶಾಲಾ ಬಳಿಯ ನಿವಾಸಿ, ಮಂಗಳೂರು ಎಲ್ಐಸಿ ಉದ್ಯೋಗಿ ರೋಹಿತ್ ಸಹಿತ ಮೂವರನ್ನು ಠಾಣೆಯ ಎಸ್ಐ ವಿನೋದ್ ರೆಡ್ಡಿ ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಿ, ಮುಚ್ಚಲಿಕೆ ಬರೆಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
"ಅಲ್ಲಾಹನ ದುಬೈಯಿಂದ ಬಂದವರಿಂದ ಪವಿತ್ರ ಭಾರತದ ನೆಲದಲ್ಲಿ ಕೊರೊನಾ ವೈರಸ್ ಹರಡುತ್ತಿದೆ. ದುಬೈಯಿಂದ ಕೇರಳಕ್ಕೆ ಬಂದಿರುವ ಹರಾಮಿ ಮುಲ್ಲಾಗಳಿಗೂ ಕೊರೊನಾ ವೈರಸ್ positive. ಹಿಂದೂಗಳೇ ಯೋಚಿಸಿ ಪವಿತ್ರ ಭಾರತಕ್ಕೆ ಕಂಟಕ ಎಲ್ಲಿಂದ ಸುರುವಾಗುವುದು ಎಂದು. ಏಸು, ಅಲ್ಲಾಹ್ ಇವರಿಂದಲೇ ಭಾರತಕ್ಕೆ ಕಂಟಕ. ಇವರ ಬೇರು ಭಾರತದಲ್ಲಿ ಕಿತ್ತು ಬಿಸಾಕಬೇಕಿದೆ" ಎಂದು ಆರೋಪಿ ಜಯಕರ ಪೋಸ್ಟ್ ಮಾಡಿದ್ದ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.