ಮಂಗಳೂರು, ಮಾ.19 (DaijiworldNews/PY) : "ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ, ಸರ್ಕಾರಿ ಕಚೇರಿಯಲ್ಲಿ ಜನ ಹೆಚ್ಚಾಗುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ಸೇವೆಗಳಿಗೆ ಮಾ.31ರವರೆಗೆ ನಿರ್ಬಂಧ ವಿಧಿಸಲಾಗಿದೆ" ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಗುರುವಾರ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, "ಸಾರ್ವಜನಿಕ ಸರ್ಕಾರದ ವಿವಿಧ ಸೇವೆಗಳನ್ನು ಪಡೆಯುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಜಿಲ್ಲಾ, ತಾಲೂಕು, ಹೋಬಳಿ ಮಟ್ಟದ ಕಚೇರಿಗೆ ಭೇಟಿ ನೀಡುವುದು, ಸಾರ್ವಜನಿಕರು ಏಕ ಕಾಲದಲ್ಲಿ ಒಟ್ಟಿಗೆ ಸೇರುವಂತಹ ಸಂದರ್ಭ ಉಂಟಾಗುವುದರಿಂದ ವೈರಾಣು ಹರಡಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಹಾಗೂ ವೈರಾಣು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ" ಎಂದು ಅವರು ತಿಳಿಸಿದ್ಧಾರೆ.
"ಅಟಲ್ ಜೀ, ಸ್ಪಂದನ, ಆಧಾರ್ ಸೇವೆಗಳು, ಆರ್.ಟಿ.ಓ ಗಳಲ್ಲಿ ಹೊಸ ಡಿ.ಎಲ್ ನೀಡುವುದಕ್ಕೆ, ಕೃಷಿ ತೋಟಗಾರಿಕೆ, ಮೀನುಗಾರಿಕೆ, ಸಮಾಜಕಲ್ಯಾಣ, ಅಲ್ಪಸಂಖ್ಯಾತ, ಹಿಂದುಳಿದ ಕಲ್ಯಾಣ, ಯುವ ಸಬಲೀಕರಣ, ಕನ್ನಡ ಸಂಸ್ಕೃತಿ ಇಲಾಖೆಗಳ ಸೇವೆಗಳಿಗೆ ನಿರ್ಬಂಧ ಹೇರಲಾಗಿದೆ" ಎಂದು ಹೇಳಿದ್ಧಾರೆ.
"ತುರ್ತು ಸೇವೆಗಳಾದ ಬ್ಯಾಂಕ್, ಅಂಚೆ ಕಚೇರಿ, ಪೊಲೀಸ್ ಸೇವೆಗಳು, ಅಗ್ನಿಶಾಮಕ ಸೇವೆಗಳು, ದೂರವಾಣಿ ಸೇವೆಗಳು, ಇಂಟರ್ನೆಟ್ ಸೇವೆಗಳು, ಕೆಎಸ್ಆರ್ಟಿಸಿ, ಸಾರಿಗೆ ಸೇವೆಗಳು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸೇವೆಗಳು, ಸ್ವಚ್ಛತೆ ಕಾರ್ಯಕ್ರಮಗಳು, ಕುಡಿಯು ನೀರು, ವಿದ್ಯುತ್ಚ್ಛಕ್ತಿ ಪೂರೈಕೆ, ಒಳಚರಂಡಿ ವ್ಯವಸ್ಥೆಗಳು, ದಿನಸಿ/ಹಣ್ಣು/ತರಕಾರಿ/ಮಾರುಕಟ್ಟೆಗಳು, ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಶವ ಸಂಸ್ಕಾರ ಇತ್ಯಾದಿ ಸೇವೆಗಳಿಗೆ ಅನ್ವಯಿಸುವುದಿಲ್ಲ" ಎಂದು ತಿಳಿಸಿದ್ದಾರೆ.
"ಈ ಸೇವೆಗಳು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದರೂ, ಕಛೇರಿಗಳಿಗೆ ರಜೆ ಘೋಷಣೆಯಾಗಿರುವುದಿಲ್ಲ. ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಅಥವಾ ಸಿಬ್ಬಂದಿ ವರ್ಗದವರು ಎಂದಿನಂತೆ ಕಛೇರಿಯಲ್ಲಿ ಲಭ್ಯವಿದ್ದು ಕರ್ತವ್ಯ ನಿರ್ವಹಿಸಬೇಕು. ಅನಧಿಕೃತ ಗೈರು ಹಾಜರಾದಲ್ಲಿ ಅಥವಾ ಅನಧಿಕೃತವಾಗಿ ಕಛೇರಿಯನ್ನು ತೆರೆಯದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಸೂಚಿಸಿದ್ದಾರೆ.