ಕಾಸರಗೋಡು, ಫೆ 18 (DaijiworldNews/SM): ಅಮಾನ್ಯಕರಣಗೊಂಡ 500 ರೂಪಾಯಿ ಮುಖಬೆಲೆಯ ಸುಮಾರು 43.50 ಲಕ್ಷ ರೂಪಾಯಿಗಳ ಸಹಿತ ಓರ್ವನನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತನನ್ನು ಪೆರ್ಲ ಉಕ್ಕಿನಡ್ಕದ ಮುಹಮ್ಮದ್ (60)ಎಂದು ಗುರುತಿಸಲಾಗಿದೆ.




ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕಾರನ್ನು ವಶಪಡಿಸಿಕೊಂಡಿದ್ದು, ಇನ್ನಿಬ್ಬರು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಸೋಮವಾರ ರಾತ್ರಿ ನಗರ ಹೊರವಲಯದ ವಿದ್ಯಾನಗರದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಸ್ವಿಫ್ಟ್ ಕಾರನ್ನು ತಪಾಸಣೆ ನಡೆಸಿದಾಗ ನೋಟುಗಳು ಪತ್ತೆಯಾಗಿವೆ.
ಬೆಂಗಾವಲಾಗಿ ಬಂದ ಕಾರಿನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ. ನೋಟುಗಳನ್ನು ಎಲ್ಲಿಗೆ ಸಾಗಿಸುತ್ತಿದ್ದುದಾಗಿ ವಿಚಾರಣೆ ಬಳಿಕವಷ್ಟೇ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಹಣದ ಮೂಲ ಎಲ್ಲಿ ಹಾಗೂ ಹಣವನ್ನು ಎಲ್ಲಿಗೆ ಕೊಂಡೊಯ್ಯಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.