ಉಡುಪಿ, ಜ 16(Daijiworld News/MSP): ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಮಂಗಳವಾರ ಮುಂಜಾನೆ ಬಂಧಿಸಿದ್ದ ಇಬ್ಬರು ಶಂಕಿತ ಉಗ್ರರನ್ನು ತಮಿಳುನಾಡಿನ 'ಕ್ಯೂ ಬ್ರಾಂಚ್' ನ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ರಾಜ್ಯ ಪೊಲೀಸರು ಕಾರ್ಯಾಚರಣೆ ನಡೆದಿದ್ದು, ಸೋಮವಾರವೇ ರೈಲ್ಪೆ ನಿಲ್ದಾಣದಲ್ಲಿ ಪೊಲೀಸರು ಬೇರು ಬಿಟ್ಟಿದ್ದರು. ಪ್ರಯಾಣಿಕರ ಚಲನವಲನಗಳ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದ ಪೊಲೀಸರು ಮಂಗಳವಾರ ಬೆಳಗ್ಗಿನ ಜಾವ 6 ಗಂಟೆ ಸುಮಾರಿಗೆ ವ್ಯಕ್ತಿಗಳಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದರು. ಇನ್ನು ಬಂಧಿತ ಶಂಕಿತ ಉಗ್ರರನ್ನು ಮಂಗಳವಾರವೇ 'ಕ್ಯೂ ಬ್ರಾಂಚ್' ಪೊಲೀಸರು ತಮಿಳುನಾಡಿಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾವುದೇ ಮಾಹಿತಿ ನೀಡಿಲ್ಲ.