ಕೊಣಾಜೆ, ಜ 15 (DaijiworldNews/SM): ಕುರ್ಚಿಗಳನ್ನು ತುಂಬಿದ್ದ ಲಾರಿ ಬೆಂಕಿಗಾಹುತಿಯಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಂಧನಕ್ಕೆ ಪೊಲೀಸರಿಗೆ ನೀಡಿರುವ ಗಡುವು ಮುಕ್ತಾಯವಾಗಿದೆ. ಆದರೆ ಅಡ್ಯಾರು-ಕಣ್ಣೂರು ಕಾರ್ಯಕ್ರಮವನ್ನು ದೃಷ್ಟಿಯಲ್ಲಿಟ್ಟುಕೊಂಡು, ಪೊಲೀಸರ ಮನವಿ ಮೇರೆಗೆ ಕೊಣಾಜೆ ಠಾಣೆಯೆದುರು ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಎರಡು ದಿನಗಳ ಕಾಲ ಮುಂದೂಡಲಾಗಿದೆ ಎಂದು ದೇರಳಕಟ್ಟೆ ಪೌರತ್ವ ಸಂರಕ್ಷಣಾ ಸಮಿತಿಯ ಅಕ್ಸಾ ಉಸ್ಮಾನ್ ತಿಳಿಸಿದ್ದಾರೆ.

ಜ.12ರ ಮಧ್ಯರಾತ್ರಿ ಪೌರತ್ವ ಕಾರ್ಯಕ್ರಮಕ್ಕೆ ತಂದಿರಿಸಲಾಗಿದ್ದ ಕುರ್ಚಿಗಳನ್ನು ಹೊತ್ತಿದ್ದ ಲಾರಿ ಬೆಂಕಿಗಾಹುತಿಯಾಗಿತ್ತು. ಕಿಡಿಗೇಡಿಗಳ ಕೃತ್ಯ ಎಂದು ಆರೋಪಿಸಿ ಉದ್ರಿಕ್ತ ಗುಂಪು ಘಟನಾ ಸ್ಥಳದಲ್ಲಿ ಪ್ರತಿಭಟನೆಗೆ ಸಜ್ಜಾಗಿತ್ತು. ಎಸಿಪಿ ಕೋದಂಡರಾಮ ಕೆಲವು ಗಂಟೆಗಳ ಸಮಯ ಕೇಳಿ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು.
ಇದಕ್ಕೆ ತಪ್ಪಿದಲ್ಲಿ ಮಂಗಳವಾರದಂದು ಕೊಣಾಜೆ ಠಾಣೆಗೆ ಮುತ್ತಿಗೆ ಹಾಕುವುದಾಗಿ ಪೌರತ್ವ ಸಂರಕ್ಷಣಾ ಸಮಿತಿ ಎಚ್ಚರಿಕೆ ನೀಡಿತ್ತು. ಆದರೆ ನಿಗದಿತ ಸಮಯದಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾದರು. ಅಡ್ಯಾರು-ಕಣ್ಣೂರು ಕಾರ್ಯಕ್ರಮದಿಂದಾಗಿ ಅದರ ಜವಾಬ್ದಾರಿ ತನ್ನ ಮೇಲಿರುವುದರಿಂದ ಹೆಚ್ಚಿನ ತನಿಖೆ ನಡೆಸಲು ಸಾಧ್ಯಾವಗುತ್ತಿಲ್ಲ. ಕಾರ್ಯಕ್ರಮ ಮುಗಿದ ತಕ್ಷಣ ಸೂಕ್ಷ್ಮ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಲಾಗುವುದು ಎಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ , ಕೊಣಾಜೆ ಠಾಣಾಧಿಕಾರಿಯವರನ್ನು ಭೇಟಿ ಮಾಡಿದ ಪೌರತ್ವ ಸಂರಕ್ಷಣಾ ಸಮಿತಿ ಹಾಗೂ ಊರಿನ ಗಣ್ಯರ ನಿಯೋಗ ಎರಡು ದಿನಗಳ ಕಾಲ ಪ್ರತಿಭಟನೆಯನ್ನು ಮುಂದೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.