ಮಂಗಳೂರು, ಜ 15 (Daijiworld News/MSP): ಕೇಂದ್ರ ಸರ್ಕಾರವೂ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ಬುಧವಾರ ಮಧ್ಯಾಹ್ನ 2.30 ಕ್ಕೆ ನಡೆಯುತ್ತಿರುವ ಸಮಾವೇಶಕ್ಕೆ ಉಳ್ಳಾಲದ ಕೋಟೇಪುರದಿಂದ ಅಡ್ಯಾರ್ ಕಣ್ಣೂರುವರೆಗೆ ನದಿಯಲ್ಲಿ 100 ದೋಣಿ ಮೂಲಕ ಬೃಹತ್ ರ್ಯಾಲಿ ಮೂಲಕ ಜನ ಆಗಮಿಸುತ್ತಿದ್ದಾರೆ.








ಅಡ್ಯಾರ್ ಕಣ್ಣೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಶಹಾ ಗಾರ್ಡನ್ ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿದ್ದು, ಈ ಮೈದಾನ ನೇತ್ರಾವತಿ ನದಿ ತಟದಲ್ಲಿರುವುದರಿಂದ ದೋಣಿ ಮೂಲಕ ರ್ಯಾಲಿ ನಡೆಸಿ ಸಮಾವೇಶದಲ್ಲಿ ಜನ ಭಾಗಿಯಾಗಲು ಆಗಮಿಸುತ್ತಿದ್ದಾರೆ. ರಾಷ್ಟ್ರದ್ವಜಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ದೋಣಿಗೆ ಹುಟ್ಟು ಹಾಕುತ್ತಾ ಸಾವಿರಾರು ಜನ ದೋಣಿಯಲ್ಲಿ ಆಗಮಿಸುತ್ತಿದ್ದಾರೆ.
ಒಂದು ಕೈಯಲ್ಲಿ ರಾಷ್ಟ್ರದ್ವಜ , ಮತ್ತೊಂದ್ ಕೈಯಲ್ಲಿ ಅಹಿಂಸೆ, ಬಾಯಲ್ಲಿ ಜನಗಣ ಮನ ಇದು ಸಮಾವೇಶದ ಧೇಯ್ಯವಾಕ್ಯವಾಗಿದೆ. ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್ ಮುಹಮ್ಮದ್ ಮಸೂದ್ ಅಧ್ಯಕ್ಷತೆಯಲ್ಲಿ ಸಮಾವೇಶದ ನಡೆಯಲಿದ್ದು, ನಿವೃತ್ತ ಐಎಎಸ್ ಅಧಿಕಾರಿಗಳಾದ ಹರ್ಷ ಮಂದರ್ ಮತ್ತು ಕಣ್ಣನ್ ಗೋಪಿನಾಥನ್ , ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ, ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ್ , ನ್ಯಾಯವಾದಿ ಸುಧೀರ್ ಮುರೋಳಿ ಮುಖ್ಯ ಭಾಷಣ ಮಾಡಲಿದ್ದಾರೆ.