ಬ್ರಹ್ಮಾವರ, ಜ 15 (Daijiworld News/MSP): ಬ್ರಹ್ಮಾವರದಲ್ಲಿ ಸಕ್ಕರೆ ಕಾರ್ಖಾನೆ ಪುನರುತ್ಥಾನಗೊಳ್ಳುತ್ತದೆ. ರೈತರು ಕಬ್ಬು ಬೆಳೆದರೆ ಕಾರ್ಖಾನೆಯ ಅಭಿವೃದ್ದಿಗೆ ಸರ್ಕಾರ ಆಸಕ್ತಿ ತೋರಿಸಬಹುದು ಎನ್ನುವ ದೂರಗಾಮಿ ಯೋಚನೆಯಿಂದ 2018 ರಲ್ಲಿ ಉಡುಪಿ ಜಿಲ್ಲೆಯ ಕೆಲವೆಡೆ ರೈತರು ಕಬ್ಬು ನಾಟಿ ಮಾಡಿದ್ದರು. ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರ ಮನಸ್ಸು ಮಾಡಿದರೆ ಕಬ್ಬನ್ನು ಬೀಜೋತ್ಪಾದನೆಗೆ ಬಳಸುವ ಉದ್ದೇಶ ಹೊಂದಲಾಗಿತ್ತು. ಆದರೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಉದ್ದಾರದ ಬಗ್ಗೆ ಯಾವುದೇ ಆಶಾದಾಯಕ ಬೆಳವಣಿಗೆಗಳು ಕಂಡುಬಾರದ ಹಿನ್ನೆಲೆಯಲ್ಲಿ ಕಬ್ಬು ಬೆಳೆದ ರೈತರು ಬೆಳೆದ ಕಬ್ಬನ್ನು ಎನು ಮಾಡುವುದು ಎನ್ನುವ ಆತಂಕಕ್ಕೆ ಸಿಲುಕಿದ್ದಾರೆ.




















ಇತ್ತ ವಾರಾಹಿ ನೀರಾವರಿ ಯೋಜನೆಯ ಪ್ರಾರಂಭದ ಉದ್ದೇಶವೇ ಕಬ್ಬು ಬೆಳೆಗೆ ನೀರನ್ನು ಒದಗಿಸುವುದು ಆಗಿತ್ತು. ಆದರೆ ವಾರಾಹಿ ನೀರು ರೈತರ ಜಮೀನಿಗೆ ಬರುವಾಗ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮುಚ್ಚಲ್ಪಟ್ಟಿತ್ತು. ವಾರಾಹಿ ನೀರು ರೈತರ ಜಮೀನಿನಲ್ಲಿ ಚೆಲ್ಲಾಡುತ್ತಿದೆ. 2018ರ ಪ್ರಥಮ ಪಾದದ ನೀರು ಜಮೀನಿಗೆ ಈ ನೀರನ್ನು ಸದುಪಯೋಗ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಶಾನಾಡಿಯ ರೈತ ಉಮಾನಾಥ ಶೆಟ್ಟಿ ಅವರು 12 ಎಕ್ರೆ ಗದ್ದೆಯಲ್ಲಿ ಕಬ್ಬು ನಾಟಿ ಮಾಡಿದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಬಗ್ಗೆ ಅಂಥಹ ನಿರೀಕ್ಷೆ ಹೊಂದಿಲ್ಲದಿದ್ದರೂ ಕಾರ್ಖಾನೆ ಆದರೂ ಆಗಬಹುದು ಎಂಬ ದೂರದ ಆಸೆ ಇತ್ತು. ಆದರೆ ೨೦೧೯ರ ವರ್ಷ ಮುಗಿಯುತ್ತಾ ಬಂದರೂ ಸರ್ಕಾರವಾಗಲಿ, ಸಂಬಂಧಪಟ್ಟವರು ಕಬ್ಬು ಬೆಳೆಗಾರರ ಬಗ್ಗೆ ಗಮನ ಹರಿಸದಿದ್ದಾಗ ಮುಂದೇನು ಎಂದು ಚಿಂತೆ ಮಾಡಿದ ಶೆಟ್ಟರು ಆಲೆಮನೆ ಮಾಡುವ ಯೋಚನೆ ಮಾಡಿದರು. ಅವರ ಆಲೋಚನೆಗೆ ಸ್ನೇಹಿತ ರಾಮಚಂದ್ರ ಭಟ್ ಜೊತೆಯಾದರು.
ಸುಮಾರು ೫.೫ ಲಕ್ಷ ವ್ಯಯಿಸಿ ಆಲೆಮನೆ ನಿರ್ಮಾಣ ಮಾಡಲಾಯಿತು. ಕಬ್ಬು ಕಡಿಯಲು ೧೦ ಜನ ಕಾರ್ಮಿಕರು, ಯಂತ್ರಕ್ಕೆ ಕಬ್ಬು ನೀಡಲು ಕಾರ್ಮಿಕರು, ಬೆಲ್ಲ ಮಾಡಲು ನುರಿತ ಕಾರ್ಮಿಕರನ್ನು ಜೋಡಿಸಿಕೊಂಡು ಉಮಾನಾಥ ಶೆಟ್ಟರು ಸ್ನೇಹಿತ ರಾಮಚಂದ್ರ ಭಟ್ಟರ ಜೊತೆ ಆಲೆಮನೆಗೆ ಚಾಲನೆ ನೀಡಿಯೇ ಬಿಟ್ಟರು.
ಬೆಳೆದ ಕಬ್ಬಿಗೆ ಪರ್ಯಾಯ ಮಾರ್ಗವಿಲ್ಲದಿದ್ದಾಗ ರೈತರೇ ಆಲೆಮನೆ ಮಾಡಿದ್ದು ದೊಡ್ಡ ಮಟ್ಟದಲ್ಲಿ ಜನರಲ್ಲಿ ಕುತೂಹಲ ಉಂಟು ಮಾಡಿದೆ. ಮೂರು ದಶಕಗಳ ಹಿಂದೆ ಆಲೆಮನೆ ಜಿಲ್ಲೆಯಲ್ಲಿ ಸಹಜವಾಗಿತ್ತು. ಯಾವತ್ತೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆಯಿತೋ ಅಲ್ಲಿಂದ ಆಲೆಮನೆ ನೇಪಥ್ಯಕ್ಕೆ ಸರಿಯಿತು. ಹಾಗಾಗಿ ಈ ತಲೆಮಾರಿಗೆ ಆಲೆಮನೆ ಕಲ್ಪನೆ ಹೊಸತು. ಹಾಗಾಗಿ ಶಾನಾಡಿಯ ಕುಗ್ರಾಮದಲ್ಲಿ ಆಲೆಮನೆ ಮಾಡಿದ್ದರೂ ತಾಜಾ ಸಾವಯವ ಬೆಲ್ಲ, ತಾಜಾ ಕಬ್ಬಿನ ಹಾಲು, ಜೋಲೆ ಬೆಲ್ಲಕ್ಕೆ ಜನ ಹುಡುಕಿಕೊಂಡು ಹೋಗುತ್ತಾರೆ. ಆರಂಭದಿಂದಲೇ ಶಾನಾಡಿ ಆಲೆಮನೆ ಒಳ್ಳೆಯ ಜನಪ್ರಿಯತೆ ಪಡೆದುಕೊಂಡಿದೆ.
ಶಾನಾಡಿ ಆಲೆಮನೆಯಲ್ಲಿ ಉಮಾನಾಥ ಶೆಟ್ಟರ ಕಬ್ಬನ್ನು ವಾರದಲ್ಲಿ ಐದು ದಿನ ಅರೆದರೆ, ರಾಮಚಂದ್ರ ಭಟ್ಟರು ಎರಡು ದಿನ ತಾವು ಬೆಳೆಸಿದ ಕಬ್ಬನ್ನು ಅರೆಯುತ್ತಾರೆ. ದಿನಕ್ಕೆ ಮೂರು ಟನ್ ಬೆಲ್ಲ ಮಾಡಲಾಗುತ್ತಿದೆ. ತಾಜಾ ಸಾವಯವ ಬೆಲ್ಲ ಒಂದು ಕೆಜಿಯಿಂದ ಆರಂಭಿಸಿ ಡಬ್ಬಿಯ ತನಕ ಸಿಗುತ್ತದೆ. ಯಾವುದೇ ರಾಸಾಯನಿಕ, ಸಕ್ಕರೆ ಬಳಸದೇ ತಾಜಾ ಕಬ್ಬಿನಿಂದಲೇ ತಯಾರಾಗುವ ಆಲೆಮನೆಯ ಬೆಲ್ಲ ಬಹುಜನಪ್ರಿಯತೆ ಪಡೆದುಕೊಂಡಿದೆ. ದಿನಕ್ಕೆ 100-150 ಜನ ಆಲೆಮನೆ ನೋಡಲು, ಬೆಲ್ಲ ಖರೀದಿಸಲು ನಿತ್ಯ ಬರುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲಾಗುತ್ತಿದೆ.
ಹೋಟೇಲ್ ಉದ್ಯಮಿ ಆಗಿರುವ ಉಮೇಶ ಶೆಟ್ಟಿ ಯಾನೆ ಉಮಾನಾಥ ಶೆಟ್ಟರು ಕೃಷಿಯ ಒಲವು ತಾಳಿ ಈಗ ಕೃಷಿಯಲ್ಲಿಯೇ ಸಕ್ರಿಯರಾದವರು. ಸಾಕಷ್ಟು ಅನುಭವವನ್ನು ಹೊಂದಿರುವವರು. ಇವರೊಂದಿಗೆ ರಾಮಚಂದ್ರ ಭಟ್ಟರು ಕೂಡಾ ಒಳ್ಳೆಯ ಕೃಷಿಕರು. ಗುಡ್ಡ ಪ್ರದೇಶದಲ್ಲಿ ಗೇರು ತೋಪಿನ ನಡುವೆ ಅಂತರ್ ಬೇಸಾಯವಾಗಿ ತುಂತುರು ನೀರಾವರಿ ವಿಧಾನ ಅನುಸರಿಸಿ ಎರಡು ಎಕ್ರೆ ಕಬ್ಬು ಬೆಳೆದಿದ್ದಾರೆ. ಇನ್ನೊಂದು ವಿಶೇಷವೆಂದರೆ ಇಬ್ಬರು ರೈತರೇ ಆಲೆಮನೆಯಲ್ಲಿ ಬೆವರು ಸುರಿಸಿ ದುಡಿಯುವುದು ಕಂಡಾಗ ಮಣ್ಣಿನ ಮಕ್ಕಳ ಬಗ್ಗೆ ಅಭಿಮಾನ ಮೂಡುತ್ತದೆ.
ಸುವಿಶಾಲವಾದ ಶಾನಾಡಿ ಬಯಲು ಹಿಂದೆ ಕಬ್ಬು ಬೆಳೆಗೆ ಪ್ರಸಿದ್ಧಿ ಹೊಂದಿತ್ತು. ಸಿಹಿ ನಾಡು ಶಾನಾಡಿಯಲ್ಲಿ ಕಬ್ಬು ರಸವತ್ತಾಗಿ ಬೆಳೆಯುತ್ತದೆ. ಈ ಮಣ್ಣು ಕಬ್ಬು ಬೆಳೆಗೆ ಹೆಚ್ಚು ಪ್ರಶಸ್ತ. ಇಷ್ಟರ ಒಳಗೆ ಕಬ್ಬನ್ನು ಕಟಾವು ಮಾಡಬೇಕಿತ್ತು. ಈಗಾಗಲೇ ಕಬ್ಬು ಹೂವು ಬಿಡುತ್ತಿದೆ. ಸರ್ಕಾರ, ಜನಪ್ರತಿನಿಧಿಗಳು ಕಬ್ಬು ಬೆಳೆಗಾರರ ಬಗ್ಗೆಯೂ ಗಮನ ಹರಿಸಬೇಕಾಗಿದೆ.
ಆಲೆಮನೆಯ ದೂರವಾಣಿ ಸಂಖ್ಯೆ- 9448759447, 9448914872