ಮಂಗಳೂರು, ಜ 08 (DaijiworldNews/SM): ಪಂಪ್ವೆಲ್ ಫ್ಲೈಓವರ್ ಕಾಮಗಾರಿ ವಿಳಂಬವಾಗಿದೆ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದ್ದ ಬಿಜೆಪಿ ನಾಯಕರು ಉಳ್ಳಾಲದ ಖಾದರ್ ಕ್ಷೇತ್ರದ ಒಂಭತ್ತುಕೆರೆಯಲ್ಲಿ ಬಡವರಿಗೆ ಕಟ್ಟಿಕೊಡಲು ಮುಂದಾಗಿದ್ದ 390 ಮನೆಗಳ ಯೋಜನೆ ನೆನೆಗುದಿಗೆ ಬಿದ್ದಿರುವ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಇದೀಗ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಶಾಸಕ ಯು ಟಿ ಖಾದರ್, ಪಂಪ್ವೆಲ್ ಫ್ಲೈಓವರ್ ಅಪೂರ್ಣ ಕಾಮಗಾರಿಯನ್ನು ಈ ವಸತಿ ಯೋಜನೆಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಪಂಪ್ವೆಲ್ ರಸ್ತೆಯನ್ನು ಬಳಸುವ ಅಷ್ಟೂ ಜನರಿಗೆ ಅಲ್ಲಿನ ಅವ್ಯವಸ್ಥೆಯಿಂದಾಗಿ ತೊಂದರೆ ಆಗುತ್ತಿದೆ. ಪದೇ ಪದೇ ಅಪಘಾತಗಳು ಸಂಭವಿಸಿ ಪ್ರಾಣ ಹಾನಿಉಂಟಾಗಿದೆ. ಉಳ್ಳಾಲದ ಒಂಭತ್ತುಕೆರೆಯಲ್ಲಿ ಒಳಚರಂಡಿ ವ್ಯವಸ್ಥೆ ಆಗುವವರೆಗೆ ಮನೆಯಿಲ್ಲದವರಿಗೆ ಮನೆ ಕಟ್ಟಿಕೊಡುವ ಯೋಜನೆ ಜಾರಿಗೊಳಿಸದಂತೆ ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದರು.
2000ನೇ ಇಸವಿಯಲ್ಲಿ ಜಾರಿಯಾದ 390 ಮಂದಿ ಮನೆರಹಿತರಿಗೆ ಮನೆ ಕಟ್ಟಿಕೊಡುವ ಯೋಜನೆ ಇದಾಗಿದ್ದು, ಅಂದು ಮನೆ ನಿರ್ಮಾಣಕ್ಕೆ ಮುಂದಾದಾಗ ಅಲ್ಲಿನ ಸ್ಥಳೀಯರು ನ್ಯಾಯಾಲಯದ ಮೆಟ್ಟಲೇರಿದ್ದರು. ಒಂಭತ್ತುಕೆರೆ ಕಲುಷಿತವಾಗುವ ಆತಂಕ ಅವರದ್ದಾಗಿತ್ತು. ಕೊನೆಗೆ ನ್ಯಾಯಾಲಯವು ಒಳಚರಂಡಿ ವ್ಯವಸ್ಥೆ ನಿರ್ಮಾಣ ಆಗುವವರೆಗೆ ಯೋಜನೆ ಜಾರಿಗೊಳಿಸದಂತೆ ತಡೆಯಾಜ್ಞೆ ನೀಡಿದೆ. ಸ್ಥಳೀಯರು ಜಾಗ ಬಿಡದೆ ಒಳಚರಂಡಿ ಯೋಜನೆ ಮಂಜೂರು ಮಾಡದಂತೆ ಈ ಹಿಂದೆಯೇ ನಿಯಮ ಮಾಡಲಾಗಿತ್ತು. ಇದೀಗ ಅಲ್ಲಿ ಒಳಚರಂಡಿ ಯೋಜನೆ ಕಾಮಗಾರಿ ಆರಂಭವಾಗಿದೆ ಎಂದರು. ಯೋಜನೆಗಾಗಿ ಅಂದು ಒಂದು ಸೆಂಟ್ಸ್ಗೆ ಕೇವಲ 9 ಸಾವಿರ ರೂಪಾಯಿಗಳಂತೆ ಖಾಸಗಿ ಜಾಗವನ್ನು ಖರೀದಿಸಲಾಘಿತ್ತು. ಈಗ ಅದರ ಬೆಲೆ ಆರೇಳು ಲಕ್ಷ ರೂಪಾಯಿ ಆಗಿದೆ. ಈ ಕೋಟ್ಯಾಂತರ ರೂಪಾಯಿ ಆಸ್ತಿ ಸರಕಾರದ ಆಸ್ತಿಯಾಗಿ ಉಳಿದಿದೆ. ಅದು ನಷ್ಟವಾಗಿಲ್ಲ ಎಂದರು.