ಬಂಟ್ವಾಳ, ಜ 14 (Daijiworld News/MSP): ಇಲಾಖಾ ಅಧಿಕಾರಿಗಳ ನಡುವಿನ ಅಧಿಕಾರಿಗಳ ಹೊಂದಾಣಿಕೆಯ ಕೊರತೆ ಜನತೆಗೆ ಸಮಸ್ಯೆ ತರಬಾರದು, ಈ ಬಗ್ಗೆ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬಿ.ಸಿ.ರೋಡಿನ ಎಸ್ ಜೆಎಸ್ ಆರ್ ವೈ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು, ಈ ಬಗ್ಗೆ ಪ್ರಸ್ತಾಪಿಸುತ್ತಾ ಮೆಸ್ಕಾಂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಮೆಸ್ಕಾಂ ಇಲಾಖೆಯ ಪ್ರಗತಿ ವರದಿಯನ್ನು ಕೇಳಿದ ಬಳಿಕ ಸಜಿಪಮೂಡ ಗ್ರಾಮದ ಏತನೀರಾವರಿ ಸಂಪರ್ಕದ ಟ್ರಾನ್ಸ್ಫಾರ್ಮರ್ ಕೆಟ್ಟುಹೋಗಿ ಆಗಿರುವ ಸಮಸ್ಯೆ ಬಗ್ಗೆ ಗಮನ ಸೆಳೆದ ಶಾಸಕರು ಟ್ರಾನ್ಸ್ ಫಾರ್ಮರ್ ಕೆಟ್ಟು ಒಂದೂವರೆ ತಿಂಗಳಾದರೂ ಯಾಕೆ ದುರಸ್ತಿ ಮಾಡಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಅಧಿಕಾರಿ ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆದಿರುವುದಾಗಿ ಪ್ರತಿಕ್ರಿಯಿಸಿದರು. ಈ ವೇಳೆ ಆಕ್ರೋಶಗೊಂಡ ಶಾಸಕರು ಕುಡಿಯುವ ನೀರಿನ ವಿಚಾರದಲ್ಲಿ ತುರ್ತು ಅಗತ್ಯವಿದೆ, ಈಗಿನ ಕಾಲದಲ್ಲೂ ಪತ್ರ ಬರೆದು ಕೊಂಡು ಕೂತಿದ್ದೀರಲ್ಲಾ ಎಂದು ಪ್ರಶ್ನಿಸಿದರಲ್ಲದೆ, ಕಳೆದ ಒಂದೂವರೆ ತಿಂಗಳಿಂದ ಆಸುಪಾಸಿನ ಗ್ರಾಮಗಳಲ್ಲಿ ಜನರು ನೀರಿನ ಬವಣೆಯನ್ನು ಜನರು ಎದುರಿಸುತ್ತಿದ್ದಾರೆ. ಈ ಬಗ್ಗೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸಿ ವಾರದೊಳಗೆ ವರದಿ ನೀಡುವಂತೆ ಅವರು ಸೂಚಿಸಿದರು. ಜಿ.ಪಂ.ಸದಸ್ಯರಾದ ತುಂಗಪ್ಪ ಬಂಗೇರ ಹಾಗೂ ಎಂ.ಎಸ್.ಮಹಮ್ಮದ್ ರವರು ಆರೋಗ್ಯ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು.
ಪುಂಜಾಲಕಟ್ಟೆ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಇಲ್ಲದೆ ರೋಗಿಗಳಿಗೆ ಸಾಕಷ್ಟು ತೊಂದರೆ ಅಗುತ್ತಿದೆ, ಇಲ್ಲಿ ಪೂರ್ಣಾವಧಿಯ ವೈದ್ಯ ರನ್ನು ನೇಮಿಸಿವಂತೆ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಒತ್ತಾಯಿಸಿದರು.
ಈ ಆಸ್ಪತ್ರೆ ಯಲ್ಲಿ ಆಯುಷ್ ವೈದ್ಯ ರು ಇದ್ದಾರೆ ಡಾಕ್ಟರ್ ಕೊರತೆಯಿರುವುದರಿಂದ ಸದ್ಯ ಸಮಸ್ಯೆ ಅಗುತ್ತಿದೆ ಎಂದು ವೈದ್ಯಾಧಿಕಾರಿ ಡಾ.ದೀಪಾ ಪ್ರಭು ತಿಳಿಸಿದರು.
ಫಾರ್ಮಸಿ, ಲ್ಯಾಬ್ ಟೆಕ್ನಿಷಿಯನ್ ಸ್ಟಾಪ್ ನರ್ಸ್ ಗಳ ಕೊರತೆಯಿರುವುದರಿಂದ ಗುತ್ತಿಗೆ ಅಧಾರದಲ್ಲಿ ನೇಮಕ ಮಾಡುವಂತೆ ಜಿ.ಪಂ.ಸದಸ್ಯ ಎಂ.ಎಸ್ ಮಹಮ್ಮದ್ ಒತ್ತಾಯಿಸಿದರು.
ಮಾತೃಪೂರ್ಣ ಯೋಜನೆಯನ್ನು ಕರಾವಳಿ ಜಿಲ್ಲೆಗೆ ಅನುಗುಣವಾಗಿ ಮಾರ್ಪಾಡು ಮಾಡಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಸಭೆಗೆ ತಿಳಿಸಿದರು. ವಾಮದಪದವಿನಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ ಎರಡು ಕಟ್ಟಡಗಳ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವ ಬಗ್ಗೆ ಅಧಿಕಾರಿ ಶಾಸಕರ ಗಮನ ಸೆಳೆದರು. ಸಂಬಂಧಪಟ್ಟ ಗುತ್ತಿಗೆ ಸಂಸ್ಥೆಯ ಬಗ್ಗೆ ವಿವರ ನೀಡುವಂತೆ ತಿಳಿಸಿದ ಶಾಸಕರು ಈ ಬಗ್ಗೆ ಬೆಂಗಳೂರಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅರಣ್ಯ ಇಲಾಖೆ ವತಿಯಿಂದ 35000 ಗಿಡಗಳನ್ನು ಬೆಳೆಸಲಾಗಿದೆ ಎಂಟೂವರೆ ಸಾವಿರ ಗಿಡಗಳನ್ನು ಹಸಿರು ಕರ್ನಾಟಕ ಯೋಜನೆಯಡಿ ಬೆಳೆಸಲಾಗಿದ್ದು ಶಾಲೆಗಳಿಗೆ ವಿತರಿಸಲು 2300 ಗಿಡಗಳನ್ನು ತಯಾರು ಗೊಳಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಸುರೇಶ್ ಸಭೆಗೆ ಮಾಹಿತಿ ನೀಡಿದರು.
ಬಂಟ್ವಾಳ ತಾಲೂಕಿನ ಒಟ್ಟು ವಿಸ್ತೀರ್ಣ ಹಾಗೂ ಸರಕಾರಿ ಜಮೀನಿನ ವಿಸ್ತೀರ್ಣ ದ ಸಂಪೂರ್ಣ ಸರ್ವೇ ನಡೆಸಿ ಮಾಹಿತಿ ನೀಡುವಂತೆ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಸರ್ವೇ ಅಧಿಕಾರಿ ಗಳಿಗೆ ಸೂಚನೆ ನೀಡುವಂತೆ ಶಾಸಕರಲ್ಲಿ ಮನವಿ ಮಾಡಿದರು. ಕಿಸಾನ್ ಸಮ್ಮಾನ್ ಯೋಜನೆಯ ಬಗ್ಗೆ ಸಭೆಯಲ್ಲಿ ಮಾಹಿತಿ ಕೇಳಿದಾಗ
ಕಿಸಾನ್ ಸಮ್ಮಾನ್ ಯೋಜನೆ 29000 ನೋಂದಣಿ ಮಾಡಲಾಗಿದೆ, ತಾಂತ್ರಿಕ ಕಾರಣಗಳಿಂದ ಕೆಲವರಿಗೆ ಯೋಜನೆ ತಲುಪಿಲ್ಲ ಎಂದು ಕೃಷಿ ಇಲಾಖಾ ಅಧಿಕಾರಿ ನಾರಾಯಣ ಶೆಟ್ಟಿ ಸಭೆಗೆ ಮಾಹಿತಿ ನೀಡಿದರು.
ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಂಚಿನಡ್ಕ ಪದವು ತ್ಯಾಜ್ಯ ಸಂಸ್ಕರಣಾ ಘಟಕ ದಲ್ಲಿ ಸಂಸ್ಕರಣಾ ಕೆಲಸಕ್ಕೆ ಶೀಘ್ರವಾಗಿ ತಯಾರು ಮಾಡಿ,
ಮುಂದಿನ 15 ದಿನದೊಳಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ತ್ಯಾಜ್ಯ ವನ್ನು ಕಂಚಿನಡ್ಕ ಪದವಿನ ತ್ಯಾಜ್ಯಘಟಕ ದಲ್ಲೇ ವಿಲೇವಾರಿ ಮಾಡುವ ಕೆಲಸಕಾರ್ಯಗಳು ನಡೆಯಬೇಕು ಮತ್ತು ಸರಿಯಾಗಿ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳುವಂತೆ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರಿಗೆ ಶಾಸಕರು ಸೂಚಿಸಿದರು. ಕೆಎಸ್ಆರ್ಟಿಸಿ ಬಸ್ಗಳ ಸಮಸ್ಯೆ ಗ್ರಾಮೀಣ ಮಟ್ಟದಲ್ಲಿ ಬಾಧಿಸುತ್ತಿದ್ದು ಈ ಬಗ್ಗೆ ಸಮಸ್ಯೆ ನಿವಾರಣೆಗೆ ಪ್ರತ್ಯೇಕ ಕೆಎಸ್ಸಾರ್ಟಿಸಿ ಅದಾಲತ್ ಅನ್ನು ನಡೆಸುವಂತೆ ಶಾಸಕರು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರಲ್ಲದೆ ಇದರಲ್ಲಿ ಕೆಎಸ್ ಆರ್ಟಿಸಿಯ ಜಿಲ್ಲಾ ಮಟ್ಟದ ಅಧಿಕಾರಿಗಳೂ ಭಾಗವಹಿಸುವಂತೆ ಸೂಚನೆ ನೀಡಿದರು. ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ತಹಶೀಲ್ದಾರ್ ರಶ್ಮೀ ಎಸ್.ಆರ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ವೇದಿಕೆಯಲ್ಲಿದ್ದರು.
ನೀವಾದ್ರೂ ರೇಷ್ಮೆ ಕೃಷಿ ಮಾಡಿ..!
ಇಲಾಖಾವಾರು ಪ್ರಗತಿಪರಿಶೀಲನೆ ವೇಳೆ ತಾಲೂಕು ರೇಷ್ಮೆ ಅಧಿಕಾರಿ ವಿಷಯ ಪ್ರಸ್ತಾಪಿಸಿ, ಕೆಲವರು ಈ ವರ್ಷ ರೇಷ್ಮೆ ಕೃಷಿ ಮಾಡುವುದಾಗಿ ಹೇಳಿದ್ದರು, ಆದರೆ ಯಾರೂ ಮಾಡಿಲ್ಲ ಮಾಡಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಜೇಶ್ ನಾಯ್ಕ್ , ನೀವಾದ್ರೂ ಮಾಡಬಹುದಲ್ವಾ, ಅದನ್ನು ನೋಡಿ ಇನ್ಯಾರಾದ್ರೂ ಮಾಡ್ತಿದ್ರೋ ಏನೋ..? ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.