ಸುಳ್ಯ, ಜ.14 (Daijiworld News/PY) : ಬೆಳ್ಳಾರೆ ಸಮೀಪದ ಕಾವಿನಮೂಲೆಯಲ್ಲಿ ವ್ಯಾನ್ ಹಾಗೂ ಸ್ಕೂಟಿ ಮಧ್ಯೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಮೃತಪಟ್ಟವರನ್ನು ಕೊಲ್ಲಮೊಗ್ರ ಚಾಂತಳದ ಚಿದಾನಂದ (40) ಎಂದು ಗುರುತಿಸಲಾಗಿದೆ.
ಚಿದಾನಂದ ಅವರು ಜ.13 ಸೋಮವಾರದಂದು ಕನಕಮಜಲಿನಲ್ಲಿರುವ ತನ್ನ ಸಂಬಂಧಿಕರ ಮನೆಯ ಗೃಹಪ್ರವೇಶ ಪೂರ್ವ ಕಾರ್ಯಕ್ರಮಕ್ಕೆ ಹೋದವರು ಮಂಗಳವಾರ ಮನೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭ ಕಾವಿನಮೂಲೆ ಎಂಬಲ್ಲಿ ಈ ಘಟನೆ ಸಂಭವಿಸಿದೆ.
ವ್ಯಾನ್ ಬೆಳ್ಳಾರೆ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿತ್ತು. ಚಿದಾನಂದ ಅವರು ಸೋಣಂಗೇರಿ ಕಡೆಯಿಂದ ಬೆಳ್ಳಾರೆಗೆ ಹೋಗುತ್ತಿದ್ದರು. ಈ ವೇಳೆ ವ್ಯಾನ್ ಹಾಗೂ ಸ್ಕೂಟಿ ನಡುವೆ ಡಿಕ್ಕಿಯಾಗಿದ್ದು, ಸ್ಕೂಟಿ ಸವಾರ ಚಿದಾನಂದ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಸ್ಕೂಟಿಯ ಹಿಂಬದಿಯಲ್ಲಿ ಕುಳಿತಿದ್ದ ವಿನೀತ್ ಎಂಬವರು ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.
ತಕ್ಷಣವೇ ಚಿದಾನಂದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.