ಉಡುಪಿ, ಜ.14 (Daijiworld News/PY) : ಉಡುಪಿ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಶಂಕಿತ ಉಗ್ರರು ಉಡುಪಿ-ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯ ವೇಳೆ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳವಾರ ಮುಂಜಾನೆ ಉಡುಪಿಯಲ್ಲಿ ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ತಮಿಳುನಾಡಿನಲ್ಲಿ ಪೊಲೀಸ್ ಅಧಿಕಾರಿ ವಿಲ್ಸನ್ ಎಂಬುವರನ್ನು ಹತ್ಯೆಗೈದು ತಪ್ಪಿಸಿಕೊಂಡಿದ್ದ ಇಬ್ಬರು ಉಗ್ರರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಬಂಧಿತ ಉಗ್ರರ ಬಗ್ಗೆ ಮಾಹಿತಿ ನೀಡಲು ಸ್ಥಳಿಯ ಪೊಲೀಸರು ನಿರಾಕರಿಸಿದ್ದಾರೆ. ಇಬ್ಬರೂ ಉಗ್ರರು ಕೇರಳ ಮೂಲಕ ಕರ್ನಾಟಕದ ಕರಾವಳಿಗೆ ಆಗಮಿಸಿರುವ ಶಂಕೆ ವ್ಯಕ್ತವಾಗಿದ್ದು, ಭಯೋತ್ಪಾದಕರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ತಮಿಳುನಾಡು ಪೊಲೀಸ್ ಅಧಿಕಾರಿ ವಿಲ್ಸನ್ ಎಂಬುವವರ ಹತ್ಯೆಗೈದ ದೃಶ್ಯಾವಳಿಯನ್ನು ಸಿಸಿಟಿವಿಯಲ್ಲಿ ಪರಿಶೀಲಿಸಿದ ಪೊಲೀಸರು ಆರೋಪಿಗಳಾದ ಶಮೀಮ್ ಮತ್ತು ತೌಫಿಕ್ ಎಂಬುವವರನ್ನು ಬಂಧಿಸಿದ್ದರು.
ವಿಲ್ಸನ್ ಹತ್ಯೆಗೈದು ಪೊಲೀಸರಿಂದ ಬಂಧನಕ್ಕೊಳಗಾದ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದರು. ಈ ಆರೋಪಿಗಳಿಗಾಗಿ ಎನ್ಐಎ ತಂಡ ಶೋಧಕಾರ್ಯ ನಡೆಸುತ್ತಿದ್ದ ಸಂದರ್ಭ ಉಡುಪಿಯಲ್ಲಿ ರಾಜ್ಯದ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.