ಕಾಸರಗೋಡು, ಜ 12 (DaijiworldNews/SM): ಐದು ಮಂದಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತನನ್ನು ಬಂಬ್ರಾಣದ ಚಂದ್ರಶೇಖರ ಎಂದು ಗುರುತಿಸಲಾಗಿದೆ.

ಈತ ಮಧೂರು ಗ್ರಾಮ ಪಂಚಾಯತ್ ಗೆ ಒಳಪಟ್ಟ ಸರಕಾರಿ ಶಾಲೆಯೊಂದರ ಸಿಬ್ಬಂದಿಯಾಗಿದ್ದಾನೆ. ಹತ್ತರ ಹರೆಯದ ಐವರು ಹೆಣ್ಮಕ್ಕಳಿಗೆ ಈತ ಕಿರುಕುಳ ನೀಡಿದ್ದು, ವಿದ್ಯಾರ್ಥಿನಿಯರು ಶಾಲಾ ತರಗತಿಯಲ್ಲಿ ಅಸ್ವಸ್ಥರಾಗಿರಾಗಿದ್ದರು. ಇದನ್ನು ಕಂಡು ಉಳಿದ ಶಿಕ್ಷಕಿಯರು ವಿಚಾರಿಸಿದಾಗ ಸಿಬ್ಬಂದಿ ಕಿರುಕುಳ ನೀಡಿದ್ದಾಗಿ ಬಹಿರಂಗಪಡಿಸಿದ್ದಾರೆ.
ಇದರಂತೆ ಶಿಕ್ಷಕಿಯರು ವಿದ್ಯಾರ್ಥಿನಿಯರ ಮನೆಯವರಿಗೆ ಹಾಗೂ ಚೈಲ್ಡ್ ಲೈನ್ ಗೆ ಮಾಹಿತಿ ನೀಡಿದ್ದರು. ಬಳಿಕ ಈತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿತ್ತು. ವಿದ್ಯಾರ್ಥಿಗಳಿಂದ ಮಾಹಿತಿ ಕಲೆ ಹಾಕಿದ ಬಳಿಕ ಈತನನ್ನು ಬಂಧಿಸಲಾಗಿದೆ. ಈತ ಇನ್ನಷ್ಟು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.