ಕುಂದಾಪುರ, ನ.21 (DaijiworldNews/AA): ಬೆಂಗಳೂರಿನ ಬಿಡದಿ ಸಮೀಪ ಎರಡು ಬೈಕ್ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕೋಟ ಪಡುಕೆರೆ ಮೂಲದ ಹೋಟೆಲ್ ಉದ್ಯಮಿ ವಿಶ್ವನಾಥ್ ಎಚ್. (55) ಮೃತಪಟ್ಟಿದ್ದಾರೆ.

ಮೃತ ವಿಶ್ವನಾಥ್ ಅವರು ಕೋಟದ ಮಣೂರು-ಪಡುಕೆರೆಯ ಜಟ್ಟಿಗೇಶ್ವರ ದೈವಸ್ಥಾನದ ಸಮೀಪದ ನಿವಾಸಿಯಾಗಿದ್ದರು. ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಇವರು, ಇತ್ತೀಚೆಗೆ ಬಿಡದಿಯಲ್ಲಿ 'ಕರಾವಳಿ ಕಿಚನ್' ಹೆಸರಿನ ಹೋಟೆಲ್ ನಡೆಸುತ್ತಿದ್ದರು.
ಗುರುವಾರ ರಾತ್ರಿ ಹೋಟೆಲ್ ವಹಿವಾಟು ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಇವರು ಚಲಾಯಿಸುತ್ತಿದ್ದ ಬೈಕ್ಗೆ ಮತ್ತೊಂದು ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ವಿಶ್ವನಾಥ್ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.