ಮಂಗಳೂರು, ನ.20 (DaijiworldNews/AA): ಬಾಕಿ ವೇತನದ ವಿಚಾರವಾಗಿ 2020ರಲ್ಲಿ ಗಾಂಧಿನಗರದ ನಿವಾಸಿಯೊಬ್ಬರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಮೊದಲನೇ ಆರೋಪಿ ಸಂತು ಯಾನೆ ಸಂತೋಷ್ ದೋಷಿ ಎಂದು ತೀರ್ಪು ನೀಡಿದ್ದು, ಎರಡನೇ ಆರೋಪಿ ಸಿದ್ದು ಯಾನೆ ಸಿದ್ದಪ್ಪ ಅವರನ್ನು ಖುಲಾಸೆಗೊಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಮಲ್ಲಿ ಲೇಔಟ್ ನಿವಾಸಿ ಸುರೇಂದ್ರನ್ ಎಂಬುವವರ ಮನೆಯಲ್ಲಿ 2020ರ ನವೆಂಬರ್ 3ರಂದು ಈ ಘಟನೆ ನಡೆದಿತ್ತು. ಸಂತೋಷ್ ಮಾಡಿದ್ದ ಕೆಲಸಕ್ಕೆ ಸುರೇಂದ್ರನ್ ಹಣ ನೀಡಿರಲಿಲ್ಲ ಎನ್ನಲಾಗಿದೆ. ಹಣ ಕೇಳುವ ಸಲುವಾಗಿ ಸಂತೋಷ್, ಸಿದ್ದಪ್ಪನೊಂದಿಗೆ ಸುರೇಂದ್ರನ್ ಮನೆಗೆ ತೆರಳಿದ್ದನು.
ಸಿದ್ದಪ್ಪನ ಪ್ರಚೋದನೆಯಿಂದ ಮನೆಯೊಳಗೆ ನುಗ್ಗಿದ ಸಂತೋಷ್, ಸುರೇಂದ್ರನ್ ಜೊತೆ ವಾಗ್ವಾದಕ್ಕಿಳಿದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಪೇಪರ್ ಕಟಿಂಗ್ ಬ್ಲೇಡ್ನಿಂದ ಸುರೇಂದ್ರನ್ ಅವರ ಕತ್ತು, ಮುಖ ಮತ್ತು ತಲೆಗೆ ಇರಿದು, ಬಳಿಕ ವ್ಯಾಯಾಮ ಮಾಡುವ ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದನು.
ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302, 392, 201, 114 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಕಾವೂರು ಪೊಲೀಸ್ ಇನ್ಸ್ಪೆಕ್ಟರ್ ರಾಘವ ಪಡೀಲ್ ತನಿಖೆ ನಡೆಸಿ, ಇಬ್ಬರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಶಿಕ್ಷೆಯ ವಿವರ:
ಅಪರಾಧಿ ಸಂತೋಷ್ಗೆ ನ್ಯಾಯಾಲಯವು ಈ ಕೆಳಗಿನಂತೆ ಶಿಕ್ಷೆ ವಿಧಿಸಿದೆ:
ಐಪಿಸಿ ಸೆಕ್ಷನ್ 302 (ಕೊಲೆ): ಜೀವಾವಧಿ ಶಿಕ್ಷೆ ಹಾಗೂ 25,000 ರೂ. ದಂಡ (ದಂಡ ಕಟ್ಟಲು ವಿಫಲವಾದರೆ ಹೆಚ್ಚುವರಿ 1 ವರ್ಷ ಜೈಲು ಶಿಕ್ಷೆ).
ಐಪಿಸಿ ಸೆಕ್ಷನ್ 392 (ಸುಲಿಗೆ): 2 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ (ದಂಡ ಕಟ್ಟಲು ವಿಫಲವಾದರೆ ಹೆಚ್ಚುವರಿ 1 ತಿಂಗಳು ಜೈಲು ಶಿಕ್ಷೆ).
ಐಪಿಸಿ ಸೆಕ್ಷನ್ 201 (ಸಾಕ್ಷ್ಯ ನಾಶ): 6 ತಿಂಗಳು ಜೈಲು ಶಿಕ್ಷೆ ಹಾಗೂ 2,000 ರೂ. ದಂಡ (ದಂಡ ಕಟ್ಟಲು ವಿಫಲವಾದರೆ ಹೆಚ್ಚುವರಿ 15 ದಿನ ಜೈಲು ಶಿಕ್ಷೆ).
ಒಟ್ಟು 32,000 ರೂ. ದಂಡದ ಮೊತ್ತದಲ್ಲಿ 7,000 ರೂ. ಸರ್ಕಾರಕ್ಕೆ ಜಮಾ ಮಾಡುವಂತೆ ಮತ್ತು ಉಳಿದ 25,000 ರೂ. ಮೊತ್ತವನ್ನು ಮೃತ ಸುರೇಂದ್ರನ್ ಅವರ ಪತ್ನಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜ್ಯೋತಿ ಪ್ರಮೋದ್ ನಾಯಕ್ ವಾದ ಮಂಡಿಸಿದ್ದರು.