ಕುಂದಾಪುರ, ನ.20 (DaijiworldNews/TA): ಕೃಷಿ ಭೂಮಿಯಿಂದ ಸಂಗ್ರಹಿಸಿದ ಒಣಹುಲ್ಲನ್ನು ಸಾಗಿಸುತ್ತಿದ್ದ ವಾಹನದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನವೆಂಬರ್ 19ರಂದು ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗೆಬೆಟ್ಟು ಬಳಿ ನಡೆದಿದೆ.

ಇಲ್ಲಿನ ಹಿರಿಯ ಕೃಷಿಕರೊಬ್ಬರ ಗದ್ದೆಯಿಂದ ಒಣಹುಲ್ಲನ್ನು ವಾಹನಕ್ಕೆ ತುಂಬಿಸಿ ಮನೆಗೆ ಸಾಗಿಸುತ್ತಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಒಣಹುಲ್ಲು ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುವಾಗಿರುವುದರಿಂದ ಕ್ಷಣಾರ್ಧದಲ್ಲೇ ಬೆಂಕಿ ವ್ಯಾಪಿಸುವ ಆತಂಕ ಎದುರಾಗಿತ್ತು. ಈ ವೇಳೆ ವಾಹನ ಚಾಲಕ ಅರುಣ್ ಶೆಟ್ಟಿ ತಕ್ಷಣ ಎಚ್ಚೆತ್ತುಕೊಂಡು ಸಮಯಪ್ರಜ್ಞೆ ಮೆರೆದಿದ್ದಾರೆ. ಅವರ ತ್ವರಿತ ಕ್ರಮದಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.
ಘಟನೆ ಗಮನಿಸಿದ ಸ್ಥಳೀಯ ಗ್ರಾಮ ಪಂಚಾಯತ್ ಸಿಬ್ಬಂದಿ ಮನೀಶ್ ಶೆಟ್ಟಿ ಅವರು ತಕ್ಷಣ ಅಗ್ನಿಶಾಮಕ ದಳದ ಗಮನಕ್ಕೆ ತಂದಿದ್ದಾರೆ. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಾಲಕನ ಸಮಯಪ್ರಜ್ಞೆ ಹಾಗೂ ಸ್ಥಳೀಯರ ತ್ವರಿತ ಸ್ಪಂದನೆಯಿಂದ ದೊಡ್ಡ ಅನಾಹುತವೊಂದು ತಪ್ಪಿದ್ದು, ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.