ಕಾಸರಗೋಡು, ನ.20 (DaijiworldNews/TA): ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಇಂದು ಬೆಳಿಗ್ಗೆ ಎಡನೀರು ಮಠಕ್ಕೆ ಭೇಟಿ ನೀಡಿದರು. ಮಠಾಧೀಶ ಸ್ವಾಮಿ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮುಖ್ಯಮಂತ್ರಿಯನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಠದ ಪ್ರತಿನಿಧಿಗಳು ಮುಖ್ಯಮಂತ್ರಿಗೆ ಪುಷ್ಪಹಾರ ಹಾಕಿ ಗೌರವಿಸಿದರು.





ಅಶೋಕ ಸ್ತಂಭದ ಲಾಂಛನ ಹೊಂದಿರುವ ಸ್ಮರಣಿಕೆಯನ್ನು ಸ್ವಾಮಿ ಸಚ್ಚಿದಾನಂದ ಭಾರತಿ ಅವರು ಮುಖ್ಯಮಂತ್ರಿಗೆ ನೀಡಿ ಸನ್ಮಾನಿಸಿದರು. ಬಳಿಕ ಮಠದ ದೇವಾಲಯಕ್ಕೆ ತೆರಳಿ ದರ್ಶನ ಪಡೆದಿದ್ದು ಮಠಾಧೀಶರು ಪ್ರಸಾದ ನೀಡಿದ್ದಾರೆ.
ಸ್ವಾಮಿ ಸಚ್ಚಿದಾನಂದ ಭಾರತಿ ಅವರೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿಗಳು, ಮತ್ತೊಮ್ಮೆ ಮಠಕ್ಕೆ ಭೇಟಿ ನೀಡುವುದಾಗಿ ತಿಳಿಸಿ ನಿರ್ಗಮಿಸಿದರು. ಸಂಸದ ರಾಜ್ಮೋಹನ್ ಉಣ್ಣಿತ್ತಾನ್, ಶಾಸಕರಾದ ಕಲ್ಲಟ್ರ ಮಾಯಿನ್ ಹಾಜಿ, ಎ.ಕೆ. ಎಂ. ಅಶ್ರಫ್, ಕೆ. ನೀಲಕಂಠನ್, ಮಾಜಿ ಸಚಿವ ಸಿ.ಟಿ. ಅಹಮದಲಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಮುಖ್ಯಮಂತ್ರಿಯೊಂದಿಗೆ ಉಪಸ್ಥಿತರಿದ್ದರು.