ಬ್ರಹ್ಮಾವರ,ನ.20 (DaijiworldNews/AK): ಸಾಲಿಗ್ರಾಮದಲ್ಲಿರುವ ತಮ್ಮ ಕಚೇರಿಯಲ್ಲಿ ಕುಳಿತಿದ್ದಾಗ 50 ವರ್ಷದ ಸಂಖ್ಯಾಶಾಸ್ತ್ರಜ್ಞರೊಬ್ಬರು ಹೃದಯಾಘಾತದಿಂದ ನವೆಂಬರ್ 19, ಗುರುವಾರ ನಿಧನರಾಗಿದ್ದಾರೆ.

ಮೃತರನ್ನು ಚೆಂಪಿ ನಿವಾಸಿ ದಿನೇಶ್ ಹೊಳ್ಳ ಸಿ ಎಂದು ಗುರುತಿಸಲಾಗಿದೆ.
ದಿನೇಶ್ ಹೊಳ್ಳ ಎಂದಿನಂತೆ ಬೆಳಿಗ್ಗೆ ಸಾಲಿಗ್ರಾಮದಲ್ಲಿರುವ ತಮ್ಮ ಕಚೇರಿಗೆ ಬಂದು ಕೆಲಸ ಆರಂಭಿಸಿದ್ದರು. ಸ್ವಲ್ಪ ಸಮಯದ ನಂತರ, ಪರಿಚಯಸ್ಥರೊಬ್ಬರು ಕಚೇರಿಗೆ ಭೇಟಿ ನೀಡಿದಾಗ, ದಿನೇಶ್ ತನ್ನ ಮೇಜಿನ ಮೇಲೆ ಬಿದ್ದ ಸ್ಥಿತಿಯಲ್ಲಿದ್ದರು.
ಸ್ಥಳೀಯ ನಿವಾಸಿಗಳ ಸಹಾಯದಿಂದ ಅವರನ್ನು ತಕ್ಷಣ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆ ತಲುಪುವ ಹೊತ್ತಿಗೆ ಅವರು ಕೊನೆಯುಸಿರೆಳೆದಿದ್ದರು. ಪ್ರಾಥಮಿಕ ಸೂಚನೆಗಳ ಪ್ರಕಾರ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ದಿನೇಶ್ ಹೊಳ್ಳ ಅವರು ತಾಯಿ, ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ಛಾಯಾಗ್ರಹಣ, ಚಿತ್ರಕಲೆ, ವ್ಯಂಗ್ಯಚಿತ್ರ, ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರು ಮನ್ನಣೆ ಗಳಿಸಿದ್ದರು.