ಉಡುಪಿ, ಜ.03 (Daijiworld News/PY) : ಮಕ್ಕಳ ಸಹಾಯವಾಣಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಹೋಟೆಲೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ 16 ವರ್ಷ ಪ್ರಾಯದ ಬಾಲಕನನ್ನು ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಜಂಟಿ ಕಾರ್ಯಾಚರಣೆ ನಡೆಸಿ ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಿದ್ದಾರೆ.

ಬಾಲಕನು 10ನೇ ತರಗತಿ ಉತ್ತೀರ್ಣನಾಗಿದ್ದು, ಬಾಲಕನಿಗೆ ವೃತ್ತಿಪರ ಕೋರ್ಸ್ಗಳ ಬಗ್ಗೆ ಒಲವು ಇರುವ ಹಿನ್ನೆಲೆಯಲ್ಲಿ, ವಿದ್ಯಾಭ್ಯಾಸ ಮುಂದುವರೆಸುವುದಾಗಿ ಆತನ ತಾಯಿ ಕೋರಿಕೊಂಡ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿಯು ಬಾಲಕನನ್ನು ಪೋಷಕರ ವಶಕ್ಕೆ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಪೂರ್ಣಿಮಾ ಭಾಗವಹಿಸಿದ್ದರು.