ಮಂಗಳೂರು, ಅ.27 (DaijiworldNews/AK):ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆ ಸಿರಿ ತೋಟಗಾರಿಕಾ ಸಂಘದಿಂದ 2026ರ ಅಕ್ಟೋಬರ್ 30ರಿಂದ ನವೆಂಬರ್ 1 ರವರೆಗೆ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ "ಸಿರಿ ಸಸ್ಯೋತ್ಸವ - 2026" ಎಂಬ ಮೂರು ದಿನಗಳ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.






ಈ ಕಾರ್ಯಕ್ರಮದಲ್ಲಿ ಅಲಂಕಾರಿಕ ಸಸ್ಯಗಳು, ಔಷಧೀಯ ಸಸ್ಯಗಳು, ಅಪರೂಪದ ಸಸ್ಯಗಳು, ಅರಣ್ಯ ಸಸ್ಯಗಳು, ಪುಷ್ಪ ವಿನ್ಯಾಸಗಳು, ಬೋನ್ಸಾಯಿ ಸಸ್ಯಗಳ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿದೆ.ವಿವಿಧ ನರ್ಸರಿ ಸಂಸ್ಥೆಗಳು, ಸಸ್ಯ ಪ್ರೇಮಿಗಳು, ಅಪರೂಪದ ಸಸ್ಯಗಳ ಸಂಗ್ರಹಕಾರರು ಪ್ರದರ್ಶನದಲ್ಲಿ ಪಾಲ್ಗೊಳ್ಳುವರು.
ಔಷಧೀಯ ಸಸ್ಯಗಳ ಪ್ರದರ್ಶನದಲ್ಲಿ 150ಕ್ಕೂ ಹೆಚ್ಚು ವಿವಿಧ ಔಷಧೀಯ ಸಸ್ಯಗಳು, 20ಕ್ಕೂ ಅಧಿಕ ವಿಧದ ಔಷಧೀಯ ಸಸ್ಯಗಳ ಬೀಜಗಳ ಮಾರಾಟ ಮತ್ತು ಪ್ರದರ್ಶನವಿದೆ.
ಅರಣ್ಯ ಸಸ್ಯಗಳ ವಿಭಾಗದಲ್ಲಿ 25 ವಿಧದ ಅರಣ್ಯ ಸಸ್ಯಗಳ ಬೀಜಗಳ ಪ್ರದರ್ಶನ ಮತ್ತು ಮಾರಾಟ, ತರಕಾರಿ ಬೀಜಗಳ ವಿಭಾಗದಲ್ಲಿ 40ಕ್ಕೂ ಹೆಚ್ಚು ವಿಧದ ತರಕಾರಿ ಬೀಜಗಳ ಪ್ರದರ್ಶನ ಮತ್ತು ಮಾರಾಟವಿದೆ.
ವಿಶೇಷ ವನಗಳ ಪರಿಚಯ ವಿಭಾಗದಲ್ಲಿ
ರಾಶಿ ವನ, ನವಗ್ರಹ ವನ ಪ್ರದರ್ಶನ ಮಾಡಲಾಗುತ್ತದೆ. ಔಷಧೀಯ ಸಸ್ಯಗಳ ಬಗ್ಗೆ ಜನಜಾಗೃತಿ ಮೂಡಿಸುವುದು, ಸ್ಥಳೀಯ ಸಸ್ಯ ವೈವಿಧ್ಯವನ್ನು ಪರಿಚಯಿಸುವುದು, ಮನೆಮನೆಗಳಲ್ಲಿ ಸಸ್ಯಗಳನ್ನು ಬೆಳೆಸಲು ಪ್ರೋತ್ಸಾಹಿಸುವುದು, ಹಾಗೂ ಪ್ರಕೃತಿ ಸಂರಕ್ಷಣೆ ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದು ಕಾರ್ಯಕ್ರಮದ ಉದ್ದೇಶ.
ಕಾರ್ಯಕ್ರಮ ದಲ್ಲಿ ಸ್ಥಳೀಯ ಸ್ವ ಉದ್ಯೋಗಿಗಳ, ಕರಕುಶಲ ಕರ್ಮಿಗಳ, ಯಂತ್ರೋಪಕರಣ ಮಾರಾಟಗಾರರ, ಮಳಿಗೆ ಸ್ಥಾಪಿಸಲಾಗುವುದು. ಸಾವಯವ ಗೊಬ್ಬರ, ತರಕಾರಿ ಬೀಜಗಳು, ಸಿರಿಧಾನ್ಯ ಮೌಲ್ಯ ವರ್ಧಿತ ಉತ್ಪನ್ನಗಳು, ವಿವಿಧ ಹಣ್ಣು, ಹೂಗಳ ಗಿಡಗಳ ಮಾರಾಟ ನಡೆಯಲಿದೆ. ಸುಮಾರು 70 ಮಳಿಗೆಗಳನ್ನು ಸ್ಥಾಪಿಸಲಾಗುವುದು.
5 ರೂಪಾಯಿ ಮೌಲ್ಯದಲ್ಲಿ ವಿವಿಧ ತರಕಾರಿ ಗಿಡಗಳನ್ನು ಮಾರಾಟ ಮಾಡಲಾಗುವುದು. ಸುಮಾರು 20 ಸಾವಿರ ಗಿಡಗಳನ್ನು ಇದಕ್ಕಾಗಿ ಸಿದ್ಧತೆ ಮಾಡಲಾಗಿದೆ. ಬೆಳಗ್ಗೆ 9ರಿಂದ ರಾತ್ರಿ 8.30 ವರೆಗೆ ನಡೆಯುವ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಕಾರ್ಯಕ್ರಮವನ್ನು ಅಕ್ಟೋಬರ್ 30 ರಂದು ಬೆಳಗ್ಗೆ 11 ಕ್ಕೆ ಜಿಲ್ಲೆಯ ಗೌರವಾನ್ವಿತರ ಸಮ್ಮುಖದಲ್ಲಿ ಉದ್ಘಾಟನೆಗೊಳ್ಳಲಿದೆ.
ತರಬೇತಿ, ಸ್ಪರ್ಧೆ ಕಾರ್ಯಕ್ರಮ:
ಅಕ್ಟೋಬರ್ 30 ಮಧ್ಯಾಹ್ನ 2ರಿಂದ ಮಹಿಳೆಯರಿಗೆ ಇಕೆಬಾನ ಪುಷ್ಪ ಜೋಡಣೆ ಮತ್ತು ಪುಷ್ಪ ರಂಗೋಲಿ ಸ್ಪರ್ಧೆ ಗಳು.
ಅಕ್ಟೋಬರ್ 31 ಬೆಳಗ್ಗೆ 10 ರಿಂದ ತಾರಸಿ ಕೈತೋಟ ಮತ್ತು ಜೇನು ಕೃಷಿ ತರಬೇತಿ.
ಮಧ್ಯಾಹ್ನ 2 ರಿಂದ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ.
ನವೆಂಬರ್ 1 ಬೆಳಗ್ಗೆ 10 ರಿಂದ ಕಸಿ ಕಟ್ಟುವ ತರಬೇತಿ ಆಯೋಜಿಸಲಾಗಿದೆ.
ಸಿರಿ ತೋಟಗಾರಿಕೆ ಸಂಘದ ಬಗ್ಗೆ:
ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ AAH 229 AHM 85 ದಿನಾಂಕ 02-01-1986 ರಂತೆ ತೋಟಗಾರಿಕೆ ಇಲಾಖೆಯ ಅಂಗಸಂಸ್ಥೆಯಾಗಿ ಸಿರಿ ತೋಟಗಾರಿಕಾ ಸೊಸೈಟಿಯನ್ನು ಸ್ಥಾಪಿಸಲಾಗಿರುತ್ತದೆ. ಸಾರ್ವಜನಿಕರಲ್ಲಿ ತೋಟಗಾರಿಕೆ ಬಗ್ಗೆ ಅರಿವು ಮೂಡಿಸುವುದು ಹಾಗೂ ತೋಟಗಾರಿಕೆ ಸಂಬಂಧಿತ ಕಾರ್ಯಕ್ರಮಗಳನ್ನು ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಆಯೋಜಿಸುವ ಉದ್ದೇಶದಿಂದ ಈ ಸಂಸ್ಥೆಯನ್ನು ರಚಿಸಲಾಗಿದೆ. ಈ ಸೊಸೈಟಿಯು ಸಹಕಾರ ಸಂಘಗಳ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಸಂಖ್ಯೆ 174/96-97 ಅಡಿಯಲ್ಲಿ ನೋಂದಾಯಿಸಲ್ಪಟ್ಟಿದೆ.
ಸೊಸೈಟಿಯು ಪ್ರಾರಂಭದಲ್ಲಿ ಅವಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ 280 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ತನ್ನ ಸ್ಥಾಪನೆ ಅವಧಿಯಿಂದಲೇ ಕಸಿ ತಂತ್ರಜ್ಞಾನ, ತಾರಸಿ ಮತ್ತು ಕೈತೋಟ, ಜೇನು ಸಾಕಾಣಿಕೆ, ಅಣಬೆ ಬೇಸಾಯ, ಬೋನ್ಸಾಯಿ ಕಲಾ ತರಬೇತಿ ಮುಂತಾದ ಅನೇಕ ತರಬೇತಿ ಕಾರ್ಯಕ್ರಮಗಳನ್ನು ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಆಯೋಜಿಸುತ್ತಾ ಬಂದಿದೆ.
ಇದಲ್ಲದೆ, ಮಂಗಳೂರಿನ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಬೀಜ, ಸಸಿಗಳು ಮತ್ತು ವಿವಿಧ ತೋಟಗಾರಿಕಾ ಪರಿಕರಗಳ ಮಾರಾಟ ಕೇಂದ್ರವನ್ನು ಸ್ಥಾಪಿಸಿ ಜಿಲ್ಲೆಯ ಬೆಳೆಗಾರರ ಅಗತ್ಯತೆಗಳನ್ನು ಪೂರೈಸುತ್ತಿದೆ.
ತೋಟಗಾರಿಕೆಯನ್ನು ಪ್ರೋತ್ಸಾಹಿಸುವ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಕದ್ರಿ ಉದ್ಯಾನವನದಲ್ಲಿ ಪ್ರತಿ ವರ್ಷ ಯಶಸ್ವಿಯಾಗಿ ಆಯೋಜಿಸಿದೆ.
ತೋಟಗಾರಿಕಾ ಇಲಾಖೆ ಪ್ರಭಾರ ತೋಟಗಾರಿಕೆ ಉಪನಿರ್ದೇಶಕ ಪ್ರವೀಣ್ ಕೆ,ಸಿರಿ ತೋಟಗಾರಿಕಾ ಸಂಘದ ಕೋಶಾಧಿಕಾರಿ ಹರಿಶ್ಚಂದ್ರ ಅಡ್ಕ, ಸಿರಿ ತೋಟಗಾರಿಕಾ ಸಂಘ, ಜೊತೆ ಕಾಯದರ್ಶಿ ಅನಂತರಾಮ ಹೇರಳೆ ಸೇರಿದಂತೆಹಲವು ಮಂದಿ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.