ಉಡುಪಿ, ಅ.27 (DaijiworldNews/AA): ಕಳೆದ ಕೆಲವು ತಿಂಗಳುಗಳಿಂದ ಜಿಲ್ಲೆಯಲ್ಲಿ ಪ್ರೇಮ ಪ್ರಕರಣಗಳು ಸೇರಿದಂತೆ ವಿವಿಧ ಕಾರಣಗಳಿಗಾಗಿ ಯುವಕ-ಯುವತಿಯರು ಮನೆ ತೊರೆಯುತ್ತಿದ್ದು, ಕಾಣೆಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಅವರ ಕುಟುಂಬದವರಲ್ಲಿ ತೀವ್ರ ಆತಂಕವನ್ನು ಉಂಟುಮಾಡಿದ್ದು, ತಮ್ಮ ಮಕ್ಕಳನ್ನು ಶೀಘ್ರವೇ ಪತ್ತೆ ಹಚ್ಚುವಂತೆ ಪೋಷಕರು ಪೊಲೀಸರಲ್ಲಿ ಮನವಿ ಮಾಡುತ್ತಿದ್ದಾರೆ.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಇತ್ತೀಚೆಗೆ ದಾಖಲಾದ ಪ್ರಕರಣಗಳ ಪ್ರಕಾರ, 18 ವರ್ಷ ಭರ್ತಿಯಾದ ಯುವತಿಯರು ಹೊಲಿಗೆ ತರಬೇತಿ, ಇತರ ತರಬೇತಿ ತರಗತಿಗಳಿಗೆ ಅಥವಾ ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿ ಮನೆ ತೊರೆದು ಮತ್ತೆ ಹಿಂದಿರುಗಿಲ್ಲ.
ಅನೇಕ ಯುವತಿಯರು ಪ್ರೇಮ ಸಂಬಂಧ ಹಿನ್ನೆಲೆಯಲ್ಲಿ ಮನೆ ತೊರೆದಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕುಟುಂಬಕ್ಕೆ ಆಸರೆಯಾಗಬೇಕಾಗಿದ್ದ ಕೆಲವು ಯುವಕರು ಕೂಡ ತಮ್ಮ ಪ್ರಿಯತಮೆಯರೊಂದಿಗೆ ಓಡಿಹೋಗಿದ್ದಾರೆ ಎನ್ನಲಾಗಿದೆ. ಇನ್ನು ಸಾಲ ನೀಡಿದವರ ಕಿರುಕುಳ, ಕುಟುಂಬದ ಸಮಸ್ಯೆ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಸಂಕಷ್ಟಗಳಿಂದಾಗಿ ಮನೆ ತೊರೆದಿದ್ದಾರೆ.
ಉದ್ಯೋಗ ಅರಸಿ ಇತರ ಜಿಲ್ಲೆ ಮತ್ತು ರಾಜ್ಯಗಳಿಂದ ತಮ್ಮ ಮಕ್ಕಳೊಂದಿಗೆ ಇಲ್ಲಿಗೆ ಬಂದಿದ್ದ ಕಾರ್ಮಿಕರು ಹಾಗೂ ಅವರ ಮಕ್ಕಳು ಕೂಡ ಕಾಣೆಯಾದ ಪ್ರಕರಣಗಳು ವರದಿಯಾಗಿವೆ.
ಪ್ರೀತಿಯ ಹೆಸರಿನಲ್ಲಿ ಯುವತಿಯರು ಶೋಷಣೆಗೆ ಒಳಗಾಗುತ್ತಿದ್ದಾರೆಯೇ ಅಥವಾ ಕಾಣೆಯಾದ ಯುವಕ-ಯುವತಿಯರು ಯಾರಾದರೂ ದೇಶವಿರೋಧಿ ಸಂಘಟನೆಗಳನ್ನು ಸೇರಿಕೊಂಡಿದ್ದಾರೆಯೇ ಎಂಬ ಭೀತಿ ಪೋಷಕರು ಮತ್ತು ಸಂಬಂಧಿಕರನ್ನು ಕಾಡುತ್ತಿದೆ. ಅವರು ತಮ್ಮ ಮಕ್ಕಳನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಮನವಿ ಮಾಡುತ್ತಿದ್ದಾರೆ.
ಕಾಣೆಯಾದವರಲ್ಲಿ ಕೇವಲ ಯುವಕ-ಯುವತಿಯರು ಮಾತ್ರವಲ್ಲದೆ 35 ವರ್ಷ ಮೇಲ್ಪಟ್ಟವರೂ ಸೇರಿದ್ದಾರೆ. ಕಾಣೆಯಾದ ಕೆಲವರನ್ನು ಪೊಲೀಸರು ಪತ್ತೆ ಹಚ್ಚಿದ್ದು, ಮತ್ತೆ ಕೆಲವರು ಮದುವೆಯಾಗಿರುವುದು ಕಂಡುಬಂದಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಒಟ್ಟು 72 ಜನರನ್ನು ಪತ್ತೆ ಹಚ್ಚುವ ಕಾರ್ಯ ಇನ್ನೂ ಬಾಕಿಯಿದೆ. 18 ವರ್ಷಕ್ಕಿಂತ ಕೆಳಗಿನ ಬಾಲಕರ ಪೈಕಿ 2024 ರಲ್ಲಿ 16, 2025 ರಲ್ಲಿ 15 ಮತ್ತು 2026 ರಲ್ಲಿ 7 ಬಾಲಕರು ಕಾಣೆಯಾಗಿದ್ದರು. ನಾಪತ್ತೆಯಾದ ಎಲ್ಲರನ್ನೂ ಪೊಲೀಸರು ಪತ್ತೆ ಹಚ್ಚಿದ್ದಾರೆ.
18 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಪೈಕಿ 2024 ರಲ್ಲಿ 16, 2025 ರಲ್ಲಿ 18 ಮತ್ತು 2026 ರಲ್ಲಿ ಇವರೆಗೆ 19 ಬಾಲಕಿಯರು ಕಾಣೆಯಾಗಿದ್ದರು. ಕಳೆದ ಮೂರು ವರ್ಷಗಳಲ್ಲಿ ಕಾಣೆಯಾಗಿದ್ದ ಎಲ್ಲಾ ಅಪ್ರಾಪ್ತ ಬಾಲಕಿಯರನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ.
18 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಲ್ಲಿ 2024 ರಲ್ಲಿ 148, 2025 ರಲ್ಲಿ 122 ಮತ್ತು 2026 ರಲ್ಲಿ ಇವರೆಗೆ 85 ಮಂದಿ ಕಾಣೆಯಾಗಿದ್ದಾರೆ. ಇವರಲ್ಲಿ 2024 ರಲ್ಲಿ 134, 2025 ರಲ್ಲಿ 105 ಮತ್ತು 2026 ರಲ್ಲಿ 59 ಜನರನ್ನು ಪತ್ತೆ ಹಚ್ಚಲಾಗಿದೆ. ಒಟ್ಟು 59 ಯುವಕರು/ಪುರುಷರು ಇನ್ನೂ ಪತ್ತೆಯಾಗಿಲ್ಲ.
ಮಹಿಳೆಯರ ಪೈಕಿ 2024 ರಲ್ಲಿ 112, 2025 ರಲ್ಲಿ 73 ಮತ್ತು 2026 ರಲ್ಲಿ ಇವರೆಗೆ 67 ಮಂದಿ ಕಾಣೆಯಾಗಿದ್ದಾರೆ. ಇವರಲ್ಲಿ 2024 ರಲ್ಲಿ 110, 2025 ರಲ್ಲಿ 72 ಮತ್ತು 2026 ರಲ್ಲಿ 57 ಜನರನ್ನು ಪತ್ತೆ ಹಚ್ಚಲಾಗಿದೆ. 13 ಯುವತಿಯರು/ಮಹಿಳೆಯರನ್ನು ಪೊಲೀಸರು ಇನ್ನೂ ಪತ್ತೆ ಹಚ್ಚಬೇಕಿದೆ.
ಕಾಣೆಯಾದವರ ಪತ್ತೆಗೆ ಪ್ರತ್ಯೇಕ ಪೊಲೀಸ್ ತಂಡವನ್ನು ರಚಿಸಲಾಗಿದೆ. ಇನ್ನು ಕೆಲವು ಯುವತಿಯರು, ಮಹಿಳೆಯರು ಹಾಗೂ ಯುವಕರು ಪತ್ತೆಯಾಗಬೇಕಿದೆ. ಕಾಣೆಯಾಗಿ ನಂತರ ಪತ್ತೆಯಾದವರಲ್ಲಿ ಯಾರೂ ಕೂಡ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ ಅಥವಾ ದೇಶವಿರೋಧಿ ಸಂಘಟನೆಗಳನ್ನು ಸೇರಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸ್ಪಷ್ಟಪಡಿಸಿದ್ದಾರೆ.