ಉಡುಪಿ,ಅ.26 (DaijiworldNews/AK): ಸೈಕಲ್ಗೆ ಕಾರು ಡಿಕ್ಕಿಯಾಗಿ ಹಿರಿಯ RSS ಮುಖಂಡರೊಬ್ಬರು ಸಾವನ್ನಪ್ಪಿದ ಘಟನೆ ಕೋಟ ಜಂಕ್ಷನ್ ಬಳಿ ನಡೆದಿದೆ.

ಕೋಟದ ಮಣೂರು ನಿವಾಸಿ ಗುರುದಾಸ್ ಶೆಣೈ (65) ಮೃತರು ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಕೋಟ ಜಂಕ್ಷನ್ ಬಳಿ ಇಂದು (ಅ.26) ಮುಂಜಾನೆ ಸೈಕಲ್ನಲ್ಲಿ ರಸ್ತೆ ದಾಟುವ ವೇಳೆ ಈ ಅಪಘಾತ ಸಂಭವಿಸಿದೆ. ಉಡುಪಿ ಕಡೆಯಿಂದ ಕುಂದಾಪುರದತ್ತ ಅತಿವೇಗವಾಗಿ ಬರುತ್ತಿದ್ದ ಕಾರು ಅವರಿಗೆ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಅವರು ಹಾರಿ ರಸ್ತೆಗೆ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಕಾರು ಡಿವೈಡರ್ಗೆ ಡಿಕ್ಕಿಯಾಗಿದ್ದು, ಚಾಲಕ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೋಟೇಶ್ವರದ ಬೀಜಾಡಿ ನಿವಾಸಿ ಪ್ರದೀಪ್ ಕಾಂಚನ್ ಗಾಯಗೊಂಡ ಕಾರು ಚಾಲಕ. ತಕ್ಷಣ ಸ್ಥಳಕ್ಕೆ ಧಾವಿಸಿದ ಕೋಟದ ಸ್ಥಳೀಯರು ಆಂಬುಲೆನ್ಸ್ ಮೂಲಕ ಗಾಯಾಳುವನ್ನು ಕರೆದೊಯ್ದು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೋಟ ಠಾಣೆಯ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.