ಮಂಗಳೂರು, ಅ.26 (DaijiworldNews/AA): ಹಬ್ಬದ ಸಮಯದಲ್ಲಿ, ವಿಶೇಷವಾಗಿ ದಸರಾ ದಿನಗಳಲ್ಲಿ ಹೊಸ ವಾಹನಗಳ ಖರೀದಿ ಹೆಚ್ಚಾಗುವುದು ಸಾಮಾನ್ಯ. ಈ ಬಾರಿಯ ದಸರಾ ಆಚರಣೆಯ ಸಂದರ್ಭದಲ್ಲಿ ಕರ್ನಾಟಕದಾದ್ಯಂತ ಲಕ್ಷಾಂತರ ವಾಹನಗಳು ಮಾರಾಟವಾಗಿವೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಒಂದಾದ ಮಂಗಳೂರು, ಐಷಾರಾಮಿ ಕಾರುಗಳ ಖರೀದಿಯಲ್ಲಿ ಇತರ ನಗರಗಳಿಗಿಂತ ಮುಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷದ ದಸರಾ ಅವಧಿಯಲ್ಲಿ ನಡೆದ ಕಾರು ಮತ್ತು ದ್ವಿಚಕ್ರ ವಾಹನಗಳ ಮಾರಾಟವನ್ನು ಹೋಲಿಸಿದರೆ, ಬೈಕ್ಗಳಷ್ಟೇ ವೇಗವಾಗಿ ಕಾರುಗಳ ಮಾರಾಟವೂ ನಡೆದಿದೆ. ದಸರಾದ 10 ದಿನಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 561 ಕಾರುಗಳು ಹಾಗೂ 1,679 ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಮಾರಾಟವಾದ ಕಾರುಗಳಲ್ಲಿ ಶೇ. 20 ಕ್ಕಿಂತ ಹೆಚ್ಚು ಕಾರುಗಳು 24 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಐಷಾರಾಮಿ ವಾಹನಗಳಾಗಿವೆ. ಪ್ರತಿ ವರ್ಷ ಗಣೇಶೋತ್ಸವದಿಂದ ದೀಪಾವಳಿಯವರೆಗೆ ವಾಹನ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬರುತ್ತದೆ. ಅಕ್ಷಯ ತೃತೀಯ ದಿನದಂದೂ ಸಹ ಇಂತಹುದೇ ಖರೀದಿ ಅಲೆಯನ್ನು ಕಾಣಬಹುದು.
ದೇಶಾದ್ಯಂತ ವಾಹನ ಮಾರಾಟದ ಅಂಕಿಅಂಶಗಳನ್ನು ಗಮನಿಸಿದರೆ, ದ್ವಿಚಕ್ರ ವಾಹನಗಳೇ ಶೇ. 70 ರಷ್ಟು ಪಾಲನ್ನು ಹೊಂದಿವೆ. ಆದರೆ ಮಂಗಳೂರಿನಲ್ಲಿ ದ್ವಿಚಕ್ರ ವಾಹನಗಳಿಗೆ ಸರಿಸಮಾನವಾಗಿ ಕಾರುಗಳ ಖರೀದಿಯೂ ಸಾಗುತ್ತಿದೆ.
10 ದಿನಗಳ ದಸರಾ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಾಹನ ಮಾರಾಟದ ವಿವರಗಳನ್ನು ನೋಡುವುದಾದರೆ, ಬಂಟ್ವಾಳದಲ್ಲಿ 59 ಕಾರು ಹಾಗೂ 221 ಬೈಕ್ಗಳು, ಪುತ್ತೂರಿನಲ್ಲಿ 110 ಕಾರು ಹಾಗೂ 356 ಬೈಕ್ಗಳು ಮಾರಾಟವಾಗಿವೆ. ಮಂಗಳೂರಿನಲ್ಲಿ ಗರಿಷ್ಠ 392 ಕಾರುಗಳು ಹಾಗೂ 1,102 ಬೈಕ್ಗಳು ಮಾರಾಟವಾಗಿವೆ. ಈ ಮೂರೂ ಆರ್ಟಿಒ ವ್ಯಾಪ್ತಿಗಳನ್ನು ಒಟ್ಟುಗೂಡಿಸಿದರೆ ಒಟ್ಟು 561 ಕಾರುಗಳು ಮತ್ತು 1,679 ದ್ವಿಚಕ್ರ ವಾಹನಗಳು ಮಾರಾಟವಾದಂತಾಗಿದೆ.