ಮಂಗಳೂರು, ಅ.26 (DaijiworldNews/AA): ಮುಂಗಾರು ಮಳೆಯು ಮುಗಿಯುತ್ತಿದ್ದಂತೆ ಕರಾವಳಿ ಕರ್ನಾಟಕದಲ್ಲಿ ಚಳಿಗಾಲದ ಅನುಭವವಾಗುವ ಬದಲು, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಿಂದಲೇ ಸೆಖೆ ಜನರನ್ನು ಹೈರಾಣಾಗಿಸಿದೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಕರಾವಳಿ ನಿವಾಸಿಗಳು ಉರಿಬಿಸಿಲು ಮತ್ತು ಧಗೆಯಿಂದ ತತ್ತರಿಸುತ್ತಿದ್ದಾರೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಿಂದ ಕಂಡುಬರುತ್ತಿದ್ದ ವಿಪರೀತ ಬಾಯಾರಿಕೆ ಮತ್ತು ಆಯಾಸ ಈಗಲೇ ಆರಂಭವಾಗಿದ್ದು, ರಸ್ತೆಬದಿಯ ಅಂಗಡಿಗಳಲ್ಲಿ ತಂಪು ಪಾನೀಯಗಳು, ಎಳೆನೀರು ಹಾಗೂ ಕಬ್ಬಿನ ಹಾಲಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಈ ಹವಾಮಾನ ವೈಪರೀತ್ಯವು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಸಾಮಾನ್ಯವಾಗಿ ಮುಂಗಾರಿನ ನಂತರ ಚಳಿಗಾಲದ ಆಗಮನವಾಗುವುದು ಪ್ರಕೃತಿ ನಿಯಮ. ಆದರೆ ಈ ಬಾರಿ ಚಳಿಗಾಲದ ಅವಧಿಯಲ್ಲೇ ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ಮಧ್ಯಾಹ್ನದ ವೇಳೆಗೆ ಬಿಸಿಲಿನ ಬೇಗೆಗೆ ಮನೆಯಿಂದ ಹೊರಬರುವುದೇ ಕಷ್ಟಕರವಾಗಿದ್ದು, ಜನರು ಬೆವರಿನಿಂದ ಮುಳುಗೇಳುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಹಗಲಿನ ತಾಪಮಾನ 28°C ಯಿಂದ 30°C ವರೆಗೆ ದಾಖಲಾಗುತ್ತಿದ್ದು, ಇದು ಹಿಂದಿನ ಬೇಸಿಗೆಯ ದಿನಗಳನ್ನು ನೆನಪಿಸುತ್ತಿದೆ. ಹವಾಮಾನದಲ್ಲಾದ ಈ ದಿಢೀರ್ ಬದಲಾವಣೆಯಿಂದ ಆರೋಗ್ಯ ಸಮಸ್ಯೆ ಎದುರಾಗುವ ಭೀತಿ ಜನರನ್ನು ಕಾಡುತ್ತಿದೆ.
ಗುರುಪುರ, ಕೈಕಂಬ ಹಾಗೂ ವಾಮಂಜೂರು ಭಾಗದ ಸಣ್ಣಪುಟ್ಟ ಅಂಗಡಿಗಳಲ್ಲಿ ಎಳೆನೀರಿನ ರಾಶಿಗಳೇ ಕಂಡುಬರುತ್ತಿದ್ದು, ಸ್ಥಳೀಯ ತಳಿಗಳ ಜೊತೆಗೆ ಕೆಂದಾಳೆ ಎಳೆನೀರು ಮಾರಾಟ ಜೋರಾಗಿದೆ. ಕೈಕಂಬದಿಂದ ಬಜಪೆ ಕಡೆಗೆ ಹೋಗುವ ರಸ್ತೆಯ ಬದಿಗಳಲ್ಲಿ ಆರೇಳು ಕಬ್ಬಿನ ಹಾಲಿನ ಅಂಗಡಿಗಳು ತಲೆಎತ್ತಿವೆ. ಬೆಳಗ್ಗೆ ಶೇಖರಿಸಿಟ್ಟ ಎಳೆನೀರು ಸಂಜೆಯಾಗುವಷ್ಟರಲ್ಲಿ ಖಾಲಿಯಾಗುತ್ತಿವೆ. ಕಾರು ಹಾಗೂ ಇತರ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಬೆಲೆ ಯೋಚಿಸದೆ ಎಳೆನೀರು, ಕಬ್ಬಿನ ಹಾಲು ಕುಡಿದು ಪ್ರಯಾಣ ಮುಂದುವರಿಸುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಐಸ್ಕ್ರೀಮ್ ಪಾರ್ಲರ್ಗಳ ಮುಂದೆ ಜನರ ಸಾಲು ಕಂಡುಬರುತ್ತಿದ್ದು, ತಂಪು ಪಾನೀಯಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.
ಸಾಮಾನ್ಯವಾಗಿ ಎಳೆನೀರು, ಕಬ್ಬಿನ ಹಾಲು, ನಿಂಬೆ ಸೋಡಾ, ಶರಬತ್ತು, ಐಸ್ಕ್ರೀಮ್, ಮಜ್ಜಿಗೆ ಹಾಗೂ ಇತರ ತಂಪು ಪಾನೀಯಗಳಿಗೆ ಡಿಸೆಂಬರ್ನಿಂದ ಏಪ್ರಿಲ್ ಅವಧಿಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ ಈ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲೇ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಕೆಲವು ದಿನಗಳಲ್ಲಂತೂ ದಾಸ್ತಾನು ಪೂರ್ತಿ ಖಾಲಿಯಾಗುತ್ತಿದೆ. ಸಣ್ಣ ಮಟ್ಟದ ತುಂತುರು ಮಳೆಯಾದರೂ ಬಾಯಾರಿಕೆ ಮತ್ತಷ್ಟು ಹೆಚ್ಚಾಗುತ್ತಿದೆಯೇ ಹೊರತು ಸೆಖೆ ಕಡಿಮೆಯಾಗುತ್ತಿಲ್ಲ ಎಂದು ಕೈಕಂಬದ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ. ಸದ್ಯಕ್ಕೆ ದರಗಳು ಸಾಮಾನ್ಯವಾಗಿದ್ದರೂ, ಮುಂಬರುವ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ಎಳೆನೀರಿನ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.