ಉಡುಪಿ, ಅ.26 (DaijiworldNews/AA): ವೃದ್ಧೆಯೊಬ್ಬರ ಮನೆಯಿಂದ ಚಿನ್ನದ ಸರ ಕಳವು ಮಾಡಿದ್ದ 45 ವರ್ಷದ ಹೋಮ್ ನರ್ಸ್ನನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದು, ಆತನಿಂದ 1.85 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಉಡುಪಿಯ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರ ನಿವಾಸಿ, ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಉಮೇಶ್ ಶೆಟ್ಟಿ (45) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ಗ್ರಾಮದ ಬಡಪಾಲು ನಿವಾಸಿ ಬಾಬಿ ಹಾಂಡ್ತಿ(75) ಎಂಬುವವರ ಮನೆಯಲ್ಲಿ ಸೆಪ್ಟೆಂಬರ್ 13 ರಂದು ಈ ಘಟನೆ ನಡೆದಿತ್ತು. ಅಂದು ಬೆಳಗ್ಗೆ ಬಾಬಿ ಹಂಡ್ತಿ ಅವರ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ, "ನಿಮ್ಮ ಮಗ ದಿನೇಶ್ ಸಾವಿನ ಬಗ್ಗೆ ನನಗೆ ಮಾಹಿತಿ ಇದೆ. ನಾಳೆ ಇನ್ಶೂರೆನ್ಸ್ ಅಧಿಕಾರಿಗಳು ಬರಲಿದ್ದು, ನಿಮಗೆ ಹೆಚ್ಚಿನ ಪರಿಹಾರ ಮೊತ್ತ ಸಿಗುವಂತೆ ನಾನು ಸಹಾಯ ಮಾಡುತ್ತೇನೆ" ಎಂದು ನಂಬಿಸಿದ್ದ.
ಅದೇ ದಿನ ಮಧ್ಯಾಹ್ನ ಬಾಬಿ ಹಾಂಡ್ತಿ ಅವರು ತಮ್ಮ ಕುತ್ತಿಗೆಯಲ್ಲಿದ್ದ ಸುಮಾರು ಎರಡು ಪವನ್ ತೂಕದ ಚಿನ್ನದ ಸರವನ್ನು ತೆಗೆದು ಮನೆಯೊಳಗಿನ ಮೇಜಿನ ಮೇಲಿಟ್ಟಿದ್ದರು. ಈ ವೇಳೆ ಮತ್ತೆ ಮನೆಗೆ ಬಂದ ಆರೋಪಿ, ಅವರೊಂದಿಗೆ ಸಾಂತ್ವನದ ಮಾತುಗಳನ್ನಾಡಿದ್ದಾನೆ. ಬಳಿಕ ಬಾಬಿ ಹಾಂಡ್ತಿ ಅವರು ತೋಟಕ್ಕೆ ಹೋದ ಸಮಯವನ್ನು ಕಾಯ್ದು, ಮೇಜಿನ ಮೇಲಿಟ್ಟಿದ್ದ ಚಿನ್ನದ ಸರವನ್ನು ಕದ್ದು ಸ್ಥಳದಿಂದ ಕಾಲ್ಕಿತ್ತಿದ್ದ.
ಈ ಕುರಿತು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಹಿರಿಯಡ್ಕ ಪೊಲೀಸರು ತನಿಖೆ ಆರಂಭಿಸಿದ್ದರು. ಸುಮಾರು 50 ರಿಂದ 60 ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಾಂತ್ರಿಕ ನೆರವನ್ನು ಬಳಸಿಕೊಂಡು ತನಿಖೆ ನಡೆಸಿದ ಪೊಲೀಸರು, ಅಕ್ಟೋಬರ್ 23 ರಂದು ಉಮೇಶ್ ಶೆಟ್ಟಿಯನ್ನು ಆತನ ನಿವಾಸದ ಬಳಿ ವಶಕ್ಕೆ ಪಡೆದಿದ್ದಾರೆ.
ಬಂಧಿತನಿಂದ 1.85 ಲಕ್ಷ ರೂಪಾಯಿ ಮೌಲ್ಯದ 15 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಹಿರಿಯಡ್ಕ ಎಸ್ಐ ಪುನೀತ್ ಕುಮಾರ್, ಪೊಲೀಸ್ ಸಿಬ್ಬಂದಿಗಳಾದ ಪ್ರವೀಣ್ ರೈ, ಪ್ರವೀಣ್ ಶೆಟ್ಟಿ, ರಮೇಶ್ ಹೇರ್ಗ, ಕೃಷ್ಣ ಪೂಜಾರಿ ಹಾಗೂ ಮಹಾಂತೇಶ್ ಅವರಿದ್ದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.