ಮಂಗಳೂರು, ಅ.25 (DaijiworldNews/AA): ದ್ವಿಚಕ್ರ ವಾಹನಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 3 ಅಪ್ರಾಪ್ತ ಬಾಲಕರು ಸೇರಿದಂತೆ 7 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಬಂಧಿತರಿಂದ ಕಳವು ಮಾಡಲಾಗಿದ್ದ 6 ದ್ವಿಚಕ್ರ ವಾಹನಗಳನ್ನು, ಮತ್ತು ಕೃತ್ಯಕ್ಕೆ ಬಳಸಿದ 3 ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಮಂಗಳೂರು, ವಾಮಂಜೂರಿನ ಮೂಡುಶೆಡ್ಡೆ ಗ್ರಾಮದ ಶಿವನಗರ ನಿವಾಸಿ ಮಹಮ್ಮದ್ ಸಿಯಾಮ್ (19), ಮಂಗಳೂರು, ಬೈಕಂಪಾಡಿ, ತೋಕೂರು, ಜೋಕಟ್ಟೆ ನಿವಾಸಿ ಮುಹಮ್ಮದ್ ನಾಸೀಫ್ ಅಲಿಯಾಸ್ ನಸೀಫ್(19), ಮಂಗಳೂರು, ವಾಮಂಜೂರಿನ ಮೂಡುಶೆಡ್ಡೆ ಗ್ರಾಮದ ಶಿವನಗರ ನಿವಾಸಿ ಮೊಹಮ್ಮದ್ ರಾಹೀಲ್(18), ಮಂಗಳೂರು, ಕುಟ್ಟಿ ಪಲ್ಕೆಯ ತಿರುವೈಲು, ಸದಾಶಿವ ನಗರ ನಿವಾಸಿ ನಿಖೀಲ್(18) ಸೇರಿದಂತೆ 3 ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಕಳವು ಮಾಡಲಾಗಿದ್ದ ಎಲ್ಲಾ 6 ದ್ವಿಚಕ್ರ ವಾಹನಗಳನ್ನು, ಮತ್ತು ಕೃತ್ಯಕ್ಕೆ ಬಳಸಿದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 4,50,000 ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯಾ ಜಂಕ್ಷನ ಬಳಿಯಿರುವ ಡಾನ ಬಾಸ್ಕೋ ಹಾಸ್ಟೇಲ್ ಅ. 12 ರಂದು ನಿಲ್ಲಿಸಿದ್ದ ಕೆ.ಟಿ.ಎಮ್ ಡ್ಯೂಕ್ ಬೈಕ್, ಅ. 19 ರಂದು ಜಪ್ಪು ಮಾರ್ಕೆಟ್ ಬಳಿ ನಿಲ್ಲಿಸಿದ್ದ ಯಮಹಾ ಎಫ್.ಜೆಡ್ ಬೈಕ್, ಅ. 21 ರಂದು ಅತ್ತಾವರ ಕೆ.ಎಮ್.ಸಿ ಆಸ್ಪತ್ರೆಯ ಬಳಿಯಿರುವ ದುರ್ಗಾ ಹೋಟೇಲ್ ಮುಂದೆ ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ಬೈಕ್ ಹಾಗೂ ಅ. 22 ರಂದು ಹೊಯಿಗೆ ಬಜಾರ ನ ಭಗವತಿ ಅಪಾರ್ಟಮೆಂಟ್ ಕೆಳಗೆ ನಿಲ್ಲಿಸಿದ್ದ ಕೆ.ಟಿ.ಎಂ. ಡ್ಯೂಕ್ ಬೈಕ್ ಕಳವಾಗಿರುತ್ತದೆ. ಅದೇ ರೀತಿ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಬಳಿ ಅ. 18 ರಂದು ನಿಲ್ಲಿಸಲಾಗಿದ್ದ ರಾಯಲ್ ಎನ್ ಪೀಲ್ಡ್ ಬುಲೆಟ್ ಬೈಕ್ ಹಾಗೂ ಕುತ್ತಾರ್ ಪಂಡಿತ್ ಹೌಸ್ ಬಳಿ ಅ. 21 ರಂದು ಯಮಹಾ ಎಫ್.ಜೆಡ್ ಬೈಕ್ ಕಳವಾಗಿರುತ್ತದೆ. ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು ಹಾಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿತ್ತು.
ಕಳವಾಗಿರುವ ದ್ವಿಚಕ್ರ ವಾಹನಗಳ ಆರೋಪಿಗಳ ಪತ್ತೆಗಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ತನಿಖೆ ನಡೆಸಿ, ಮಾಹಿತಿ ಸಂಗ್ರಹಿಸುವ ಮೂಲಕ ಒಟ್ಟು 7 ಜನರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿರುತ್ತದೆ.
ವಿಚಾರಣೆ ವೇಳೆ ಆರೋಪಿಗಳು ಇತರ ದುಶ್ಕೃತ್ಯಗಳಾದ ಸರಗಳ್ಳತನ ಮುಂತಾದ ಕೃತ್ಯಗಳನ್ನು ಎಸಗಿ ಅದರ ಲಾಭಾಂಶದಿಂದ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದರು ಎಂಬುದು ತಿಳಿದುಬಂದಿರುತ್ತದೆ. ಬೆಲೆಬಾಳುವ ಬೈಕ್ಗಳನ್ನು ಗುರಿಯಾಗಿಸಿ, ನಿಲುಗಡೆ ಮಾಡಿದ್ದ ಸ್ಥಳಗಳಿಂದ ಕಳವು ಮಾಡಿ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ತನಿಖೆಯಿಂದ ತಿಳಿದುಬಂದಿರುತ್ತದೆ. ಬಂಧಿತ 4 ಜನ ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಈ ಪತ್ತೆ ಕಾರ್ಯದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಬೈಂದೂರ ರವರ ನೇತೃತ್ವದಲ್ಲಿ ಪಿ.ಎಸ್.ಐ ಮಾರುತಿ ಹಾಗೂ ಕ್ರೈಂ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಪುಟ್ಟರಾಮ್, ಸಾಗರ ದೇವಕತ್ತಿ, ಆಂಜನೇಯ ಕೆ.ಎಸ್, ರವರು ಭಾಗವಹಿಸಿದ್ದು, ಮಂಗಳೂರು ದಕ್ಷಿಣ ಠಾಣಾ ಅಧಿಕಾರಿ ಸಿಬ್ಬಂದಿಯವರು ಪತ್ತೆ ಕಾರ್ಯಕ್ಕೆ ಸಹಕರಿಸುತ್ತಾರೆ.