ಪಾಣೆಮಂಗಳೂರು, ಅ.25 (DaijiworldNews/TA): ಗ್ರಾಮದ ನೇತ್ರಾವತಿ ನದಿ ತೀರದಲ್ಲಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದ್ದು, ಟಿಪ್ಪರ್ಗಳ ಮೂಲಕ ನಿರಂತರ ಸಾಗಾಟ ನಡೆಯುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಖಾಲಿದ್ ನಂದಾವರ ಆರೋಪಿಸಿದ್ದಾರೆ.

ಪಾಣೆಮಂಗಳೂರಿನಲ್ಲಿ ಮರಳುಗಾರಿಕೆಗೆ ಯಾವುದೇ ಪರವಾನಗಿ ನೀಡಿಲ್ಲ. ಸಜಿಪ ಮುನ್ನೂರು ಗ್ರಾಮದ ಸರ್ವೆ ನಂಬರ್ 200ರಲ್ಲಿನ 75 ಸೆಂಟ್ಸ್ ಜಾಗದ ಮಣ್ಣು ತೆರವಿಗೆ ನೀಡಿದ ಅನುಮತಿಯನ್ನು ಬಳಸಿಕೊಂಡು ಇಲ್ಲಿ ಮರಳುಗಾರಿಕೆ ನಡೆಸುವುದು ಸೂಕ್ತವಲ್ಲ ಎಂದು ಅವರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಸುಮಾರು 20 ದೋಣಿಗಳ ಮೂಲಕ ಮರಳು ತೆಗೆಯಲಾಗುತ್ತಿದ್ದು, ಸಾಗಾಟದಿಂದ ಸ್ಥಳೀಯ ನಿವಾಸಿಗಳಿಗೆ, ಶಾಲಾ ಮಕ್ಕಳ ಸುರಕ್ಷತೆಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಅವರು ದೂರಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಅನುಮತಿ ಪತ್ರ ಹಾಗೂ ಸಾಗಾಟದ ದಾಖಲೆಗಳನ್ನು ಪರಿಶೀಲಿಸಬೇಕು. ಅಕ್ರಮ ಮರಳುಗಾರಿಕೆ ದೃಢಪಟ್ಟಲ್ಲಿ ತಕ್ಷಣ ಕಾನೂನು ಕ್ರಮ ಕೈಗೊಂಡು ಮರಳುಗಾರಿಕೆಯನ್ನು ನಿಲ್ಲಿಸಬೇಕು ಎಂದು ಖಾಲಿದ್ ನಂದಾವರ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸರಿಗೆ ಮನವಿ ಮಾಡಿದ್ದಾರೆ.