ಕುಂದಾಪುರ, ಅ.25 (DaijiworldNews/TA): ಎರಡು ಖಾಸಗಿ ಬಸ್ಸುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ 28 ಮಂದಿ ಗಾಯಗೊಂಡಿದ್ದು ಅವರ ಪೈಕಿ ಮೂವರಿಗೆ ಗಂಭೀರ ಗಾಯಗಳಾದ ಘಟನೆ ಕುಂದಾಪುರದ ಮುಳ್ಳಿಕಟ್ಟೆ ಸಮೀಪದ ಅರಾಟೆ ಬ್ರಿಡ್ಜ್ ಬಳಿ ರವಿವಾರ ಬೆಳಿಗ್ಗೆ ನಡೆದಿದೆ.

ಕುಂದಾಪುರ ಕಡೆಯಿಂದ ಬೈಂದೂರಿನತ್ತ ಸಾಗುತ್ತಿದ್ದ ಶ್ರೀ ದುರ್ಗಾಂಬ ಬಸ್ಸಿಗೆ ಮಂತ್ರಾಲಯದಿಂದ ಮಂಗಳೂರಿನತ್ತ ವೇಗವಾಗಿ ಸಾಗಿ ಬಂದ ಗಣೇಶ್ ಬಸ್ಸು ಎದುರಿನಿಂದ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಶ್ರೀ ದುರ್ಗಾಂಬ ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದ್ದು ಬಸ್ಸು ತಿರುಗಿ ಹಿಂಬದಿ ಬರುತ್ತಿದ್ದ ಗೂಡ್ಸ್ ವಾಹನಕ್ಕೆ ಢಿಕ್ಕಿಯಾಗಿದೆ.
ಎರಡು ಬಸ್ಸಿನಲ್ಲಿದ್ದವರಿಗೆ ಹಾಗೂ ಗೂಡ್ಸ್ ಗಾಡಿ ಚಾಲಕನಿಗೆ ಗಾಯಗಳಾಗಿದೆ. ಗಂಭೀರ ಗಾಯಗೊಂಡವರನ್ನು ಮಣಿಪಾಲ ಆಸ್ಪತ್ರೆಗೆ ಹಾಗೂ ಕುಂದಾಪುರದ ವಿವಿಧ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗಾಯಾಳುಗಳ ವಿವರ ಇನ್ನಷ್ಟೆ ತಿಳಿಯಬೇಕಿದೆ. ಕುಂದಾಪುರ ಸಂಚಾರ ಠಾಣೆ ಪಿಎಸ್ಐ ಅನೂಪ್ ನಾಯಕ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.