ಕಾಸರಗೋಡು, ಅ.24 (DaijiworldNews/TA): ತೃಕ್ಕರಿಪುರ ಶಾಸಕ ಸಂದೀಪ್ ವಾರಿಯರ್ ಪ್ರಯಾಣಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದ ಘಟನೆ ಶನಿವಾರ ಮುಂಜಾನೆ ಮಲಪ್ಪುರಂನ ಕೋಯಿಚ್ಚನ ಬಳಿ ನಡೆದಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಶಾಸಕರು ಸೇರಿದಂತೆ ಎಲ್ಲರೂ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಶನಿವಾರ ಮುಂಜಾನೆ ಸುಮಾರು 2 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ಸಂಭವಿಸಿದೆ. ತೃಕ್ಕರಿಪುರದಿಂದ ತಮ್ಮ ಊರಾದ ಚೇತ್ತಲ್ಲೂರಿಗೆ ಹಿಂದಿರುಗುತ್ತಿದ್ದ ವೇಳೆ ಕಾರಿನ ಟೈರ್ ಏಕಾಏಕಿ ಸ್ಫೋಟಗೊಂಡಿದೆ.
ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿದೆ. ಶಾಸಕರ ಕಾರಿನ ಹಿಂದೆ ಬರುತ್ತಿದ್ದ ಇನ್ನೆರಡು ಕಾರುಗಳೂ ಪರಸ್ಪರ ಡಿಕ್ಕಿಯಾಗಿವೆ. ಆ ಕಾರುಗಳಲ್ಲಿದ್ದ ಕುಟುಂಬದ ಸದಸ್ಯರಿಗೂ ಯಾವುದೇ ಗಾಯಗಳಾಗಿಲ್ಲ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಅಸ್ತವ್ಯಸ್ತಗೊಂಡಿದ್ದ ವಾಹನ ಸಂಚಾರವನ್ನು ಸುಗಮಗೊಳಿಸಿದರು. ಬಳಿಕ ಶಾಸಕ ಸಂದೀಪ್ ವಾರಿಯರ್ ಮತ್ತು ಅವರ ತಂಡ ಮತ್ತೊಂದು ಕಾರಿನಲ್ಲಿ ಪ್ರಯಾಣ ಮುಂದುವರಿಸಿದರು.