ಬಂಟ್ವಾಳ, ಅ.24 (DaijiworldNews/TA): ಫರಂಗಿಪೇಟೆಯ ಸೇವಾಂಜಲಿಯಲ್ಲಿ ದಿವಂಗತ ಮಮತಾ ಅವರ ಸ್ಮರಣಾರ್ಥವಾಗಿ ಕುಟುಂಬಸ್ಥರು ಸಿಮರೂಬ ಎಂಬ ಔಷಧೀಯ ಗಿಡಗಳನ್ನು ವಿತರಿಸುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದ್ದಾರೆ. ಪ್ರೀತಿಯ ತಾಯಿಯ ನೆನಪನ್ನು ಸದಾ ಹಸಿರಾಗಿಡುವ ಉದ್ದೇಶದಿಂದ ಕುಟುಂಬಸ್ಥರು ಕೈಗೊಂಡ ಈ ಅರ್ಥಪೂರ್ಣ ಕಾರ್ಯವು ಸಾರ್ವಜನಿಕರ ಗಮನ ಸೆಳೆದಿದೆ.


ಸಿಮರೂಬ ಔಷಧೀಯ ಗುಣಗಳನ್ನು ಹೊಂದಿರುವ ಗಿಡವಾಗಿದ್ದು, ಇಂತಹ ಗಿಡಗಳ ವಿತರಣೆಯ ಮೂಲಕ ಹಸಿರು ಪರಿಸರದ ಮಹತ್ವದ ಜೊತೆಗೆ ಔಷಧೀಯ ಸಸ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ. ಮರ-ಗಿಡಗಳನ್ನು ನೆಟ್ಟು ಬೆಳೆಸುವುದು ಪ್ರಕೃತಿಗೆ ನಾವು ಸಲ್ಲಿಸುವ ಅಮೂಲ್ಯ ಕೊಡುಗೆಯಾಗಿದ್ದು, ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂಬ ಸಂದೇಶವನ್ನು ಈ ಕಾರ್ಯ ಸಾರಿದೆ.
ದಿವಂಗತ ಮಮತಾ ಅವರು ಪುತ್ರಿ ಶರ್ಮಿಳಾ ಹಾಗೂ ಪುತ್ರ ರವಿ ಬಂಗೇರ ಅವರನ್ನು ಅಗಲಿದ್ದಾರೆ. ತಾಯಿಯ ಸ್ಮರಣೆಯನ್ನು ಪರಿಸರ ಸಂರಕ್ಷಣೆಯೊಂದಿಗೆ ಬೆಸೆದ ಕುಟುಂಬಸ್ಥರು, ಸಿಮರೂಬ ಔಷಧೀಯ ಗಿಡಗಳ ವಿತರಣೆಯ ಮೂಲಕ ತಮ್ಮ ಪ್ರೀತಿಯ ತಾಯಿಯ ನೆನಪನ್ನು ಹಸಿರಿನ ರೂಪದಲ್ಲಿ ಜೀವಂತವಾಗಿಡುವ ಪ್ರಯತ್ನ ಮಾಡಿದ್ದಾರೆ. ದಿ.ಮಮತಾ ಅವರ ನೆನಪು ಗಿಡಗಳ ಹಸಿರಿನೊಂದಿಗೆ ಸದಾ ಜೀವಂತವಾಗಿರಲಿ ಎಂಬ ಆಶಯದೊಂದಿಗೆ ಕುಟುಂಬಸ್ಥರು ಕೈಗೊಂಡ ಈ ಕಾರ್ಯವು ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ.