ಮಂಗಳೂರು, ಅ.24 (DaijiworldNews/TA): ಸೌದಿ ಅರೇಬಿಯಾದ ಮಕ್ಕಾ, ಮದೀನಾದಲ್ಲಿ ಸಿಲುಕಿರುವ ಉಮ್ರಾ ಯಾತ್ರಿಕರು ಸಂಕಷ್ಟದಲ್ಲಿರುವ ಪರಿಸ್ಥಿತಿ ತಿಳಿಯುತ್ತಿದ್ದಂತೆ ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷರು, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸದಸ್ಯರನ್ನೊಳಗೊಂಡ ತಂಡವನ್ನು ಮಕ್ಕಾ ಮತ್ತು ಮದೀನಾಕ್ಕೆ ಕಳುಹಿಸಲಾಗಿದೆ. ಈ ತಂಡವು ಅಲ್ಲಿನ ಭಾರತೀಯ ಸಮುದಾಯದ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಯಾತ್ರಿಕರಿಗೆ ಉಚಿತ ಊಟ, ವಸತಿ ಮತ್ತು ಅಗತ್ಯ ಔಷಧಿಗಳ ವ್ಯವಸ್ಥೆ ಮಾಡಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.

ಸಿಲುಕಿರುವ ಯಾತ್ರಿಕರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ವಿಶೇಷ ವಿಮಾನಗಳ ವ್ಯವಸ್ಥೆ ಮಾಡುವಂತೆ ಸಿಎಂ ಮೂಲಕ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದು ಒತ್ತಾಯಿಸಲಾಗಿದೆ. ಮುಂಗಡ ಟಿಕೆಟ್ ಬುಕಿಂಗ್ ಮಾಡಿಸಿಕೊಂಡು ಪ್ರಯಾಣಿಕರನ್ನು ವಿದೇಶಕ್ಕೆ ಕರೆದೊಯ್ದ ಏರ್ಲೈನ್ಸ್ ಸಂಸ್ಥೆಗಳೇ ಅವರನ್ನು ಸುರಕ್ಷಿತವಾಗಿ ಮರಳಿ ಕರೆತರುವ ಜವಾಬ್ದಾರಿ ಹೊಂದಿರುತ್ತವೆ.
ಈ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಏರ್ಲೈನ್ಸ್ಗಳ ವಿರುದ್ಧ ಹಜ್ ಸಮಿತಿ ವತಿಯಿಂದ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.