ಬೆಳ್ತಂಗಡಿ, ಅ.24 (DaijiworldNews/AA): ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆ ಸುರಕ್ಷತೆಯ ಕೊರತೆಯಿಂದಾಗಿ ಪ್ರಯಾಣಿಕರಲ್ಲಿ ತೀವ್ರ ಸಂಚಾರ ಭೀತಿ ಆವರಿಸಿದೆ. ಐದು ದಿನಗಳ ಹಿಂದೆ ಇಲ್ಲಿ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಭಾನುವಾರ ಸಂಜೆ ಉಜಿರೆ ಕಡೆಗೆ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್, ಚಾರ್ಮಾಡಿ ಪಟ್ಟಣದಲ್ಲಿ ಕಾರೊಂದಕ್ಕೆ ಢಿಕ್ಕಿ ಹೊಡೆದು ಬಳಿಕ ಟೆಂಪೋಗೆ ಬಡಿತವಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಟೆಂಪೋ ಜಖಂಗೊಂಡಿದೆ. ಈ ಅಪಘಾತದಿಂದಾಗಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಸುಮಾರು ಒಂದು ಗಂಟೆ ಕಾಲ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಇದರಿಂದ ಪ್ರಯಾಣಿಕರು ಮತ್ತು ಚಾಲಕರು ತೀವ್ರ ಪರದಾಡುವಂತಾಯಿತು.
ಮತ್ತೊಂದು ಅಪಘಾತ ಸೋಮವಾರ ಸಂಜೆ ನಡೆದಿದ್ದು, ನಿಯಂತ್ರಣ ತಪ್ಪಿದ ಗೂಡ್ಸ್ ಟೆಂಪೋವೊಂದು ರಸ್ತೆಬದಿಗೆ ಮಗುಚಿ ಬಿದ್ದಿದೆ. ಟೆಂಪೋದಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸತತ ಎರಡು ದಿನಗಳಲ್ಲಿ ಸಾಲು ಸಾಲು ಅಪಘಾತಗಳು ಸಂಭವಿಸಿರುವುದು ಚಾರ್ಮಾಡಿ ಪಟ್ಟಣದ ರಸ್ತೆ ಸುರಕ್ಷತೆಯ ಕುರಿತು ತೀವ್ರ ಕಳವಳ ಮೂಡಿಸಿದೆ.
ಚಾರ್ಮಾಡಿ ಪಟ್ಟಣ ಪ್ರದೇಶದಲ್ಲಿ ನಿತ್ಯ ಭಾರಿ ಸಂಖ್ಯೆಯ ವಾಹನಗಳು ಸಂಚರಿಸುತ್ತವೆ. ಮಳೆಯ ಸಮಯದಲ್ಲಿ ರಸ್ತೆಗಳು ಜಾರುವುದರಿಂದ ಈ ಭಾಗದಲ್ಲಿ ಪ್ರಯಾಣಿಸುವುದು ಮತ್ತಷ್ಟು ಅಪಾಯಕಾರಿಯಾಗಿದೆ. ಪ್ರಾಣಹಾನಿ ಅಥವಾ ಅಪಘಾತಗಳು ನಡೆದ ಮೇಲಷ್ಟೇ ಎಚ್ಚೆತ್ತುಕೊಳ್ಳದೆ, ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅಪಘಾತ ಸಂಭವಿಸುವ ಸೂಕ್ಷ್ಮ ಪ್ರದೇಶಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಕ್ಷಣ ಪರಿಶೀಲಿಸಬೇಕು, ಮಾಸಿಹೋಗಿರುವ ರಸ್ತೆ ಗುರುತುಗಳನ್ನು ಮರುಚಿತ್ರಿಸಬೇಕು, ಮಳೆಗಾಲದಲ್ಲಿ ವಾಹನಗಳು ಸ್ಕಿಡ್ ಆಗದಂತೆ ಸೂಕ್ತ ರಕ್ಷಣಾ ವ್ಯವಸ್ಥೆಗಳನ್ನು ಮಾಡಬೇಕು ಹಾಗೂ ಅಪಾಯಕಾರಿ ವಲಯಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ತಡೆಗೋಡೆ/ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇಲ್ಲದಿದ್ದರೆ ಚಾರ್ಮಾಡಿ ಪಟ್ಟಣದಲ್ಲಿ ಅಪಘಾತದ ಭೀತಿ ನಿರಂತರವಾಗಿ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.
ಚಾರ್ಮಾಡಿ ಪಟ್ಟಣ ಪ್ರದೇಶದಲ್ಲಿ ಮಳೆ ಬಂದಾಗಲೆಲ್ಲ ಹೆದ್ದಾರಿ ತೀವ್ರವಾಗಿ ಜಾರಲಾರಂಭಿಸುತ್ತದೆ. ಕಳೆದ ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ರಸ್ತೆಯ ಮೇಲ್ಮೈ ತೇವಗೊಂಡು ಚಾಲಕರಿಗೆ ವಾಹನದ ಮೇಲಿನ ನಿಯಂತ್ರಣ ಸಾಧಿಸುವುದು ಕಷ್ಟಕರವಾಗಿದೆ. ಭಾರಿ ಸರಕು ಸಾಗಣೆ ವಾಹನಗಳು ನಿರಂತರವಾಗಿ ಸಂಚರಿಸುವ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಣ್ಣ ಪ್ರಮಾಣದ ಚಾಲನಾ ನಿರ್ಲಕ್ಷ್ಯವೂ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ವಾಹನಗಳು ಜಾರುವುದನ್ನು ತಡೆಯಲು ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಈ ಹಿಂದೆ 'ಆಂಟಿ-ಸ್ಕಿಡ್' ರಸ್ತೆ ಗುರುತುಗಳನ್ನು ಹಾಕಿತ್ತು. ಆದರೆ, ರಸ್ತೆಯ ಮೇಲಿದ್ದ ಈ ಬಣ್ಣದ ಗುರುತುಗಳು ಸಂಪೂರ್ಣವಾಗಿ ಸವೆದುಹೋಗಿದ್ದು, ಮಳೆ ಬಂದಾಗ ವಾಹನಗಳ ಟೈರ್ಗಳು ರಸ್ತೆಯ ಹಿಡಿತವನ್ನು ಕಳೆದುಕೊಳ್ಳುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.