ಮಂಗಳೂರು, ಅ.21 (DaijiworldNews/TA): ಎಂಟು ಕೈಗಳಲ್ಲಿ ಆಯುಧಗಳನ್ನು ಹಿಡಿದು, ದುಷ್ಟ ಸಂಹಾರಿಣಿಯಾಗಿ, ಭಕ್ತರ ಪಾಲಿನ ಅಭಯದಾಯಿನಿಯಾಗಿ ಕಂಗೊಳಿಸುವ ಶ್ರೀದೇವಿ, ರಂಗಸ್ಥಳದಲ್ಲಿ ದೇವಿಯ ಈ ದಿವ್ಯ ಸ್ವರೂಪವನ್ನು ಕಂಡು ಒಂದು ಕ್ಷಣ ಬೆರಗಾದ ಪ್ರೇಕ್ಷಕರು. ಆದರೆ, ಈ ಪಾತ್ರದ ಹಿಂದಿರುವುದು ಕೇವಲ ಕಲಾವಿದೆಯ ಪ್ರತಿಭೆಯಷ್ಟೇ ಅಲ್ಲ, ಧರ್ಮದ ಗಡಿಗಳನ್ನು ಮೀರಿ ಕಲೆಯನ್ನು ಆರಾಧಿಸುವ ಮನಸ್ಸು.



























ಹೌದು, ಕರಾವಳಿಯ ಯಕ್ಷಗಾನ ರಂಗಸ್ಥಳದಲ್ಲಿ ಧಾರ್ಮಿಕ ಸೌಹಾರ್ದತೆಯ ಅಪೂರ್ವ ಚಿತ್ರಣವೊಂದು ಅನಾವರಣಗೊಂಡಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಯಕ್ಷಗಾನ ಕಲಾವಿದೆ ಅರ್ಷಿಯಾ ಖಾನ್, ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಅಕ್ಟೋಬರ್ 20ರಂದು ನಡೆದ 'ಸಂಪೂರ್ಣ ಶ್ರೀ ದೇವಿ ಮಹಾತ್ಮೆ' ಯಕ್ಷಗಾನ ಪ್ರಸಂಗದಲ್ಲಿ ಅಷ್ಟಭುಜೆಯಾಗಿ, ಶ್ರೀದೇವಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಮನಮೋಹಕ ಅಭಿನಯ ಕಲಾಭಿಮಾನಿಗಳ ಗಮನ ಸೆಳೆದಿದೆ. ಯಕ್ಷಗಾನ ಕ್ಷೇತ್ರದಲ್ಲಿ ಮುಸ್ಲಿಂ ಮಹಿಳೆಯಾಗಿ ಗುರುತಿಸಿಕೊಂಡಿರುವ ಅರ್ಷಿಯಾ ಖಾನ್ ಅವರ ಈ ಸಾಧನೆ, ಕರಾವಳಿಯ ಕಲಾಪರಂಪರೆಯ ವಿಶಾಲ ಮನೋಭಾವಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ಬಾಲ್ಯದಲ್ಲೇ ಯಕ್ಷಗಾನದ ಸೆಳೆತ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮಾಡ ಮೂಲದ ಅರ್ಷಿಯಾ ಖಾನ್, ತನು ವಿಟ್ಲ ಎಂಬ ಹೆಸರಿನಿಂದಲೂ ಪರಿಚಿತರು. ಬಾಲ್ಯದಿಂದಲೇ ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು, ಮನೆಯ ಆಸುಪಾಸಿನಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳನ್ನು ನೋಡಿ ಈ ಕಲೆಯತ್ತ ಆಕರ್ಷಿತರಾದರು.
ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ, ಅಂದರೆ ಕೇವಲ ಒಂಬತ್ತು ವರ್ಷದ ವಯಸ್ಸಿನಲ್ಲೇ ಯಕ್ಷಗಾನ ಕಲಿಕೆಯನ್ನು ಆರಂಭಿಸಿದರು. ನಿವೃತ್ತ ಉಪ ತಹಸೀಲ್ದಾರ್ ಆಗಿದ್ದ ಇವರ ತಂದೆ ಅಬ್ದುಲ್ ಖಾದರ್ ಮತ್ತು ತಾಯಿ ಮುಮ್ತಾಜ್ ಮಗಳ ಕಲಾ ಆಸಕ್ತಿಗೆ ಪೂರ್ಣ ಬೆಂಬಲ ನೀಡಿದ್ದಾರೆ. ಹೀಗೆ ಬಾಲ್ಯದಲ್ಲಿ ಆರಂಭವಾದ ಯಕ್ಷಗಾನದ ಪಯಣ ಇಂದು 12 ವರ್ಷಗಳ ರಂಗಾನುಭವದೊಂದಿಗೆ ಹೊಸ ಮೈಲಿಗಲ್ಲನ್ನು ತಲುಪಿದೆ.
ಯಕ್ಷಗಾನ ಗುರು ಕದ್ರಿ ರಮೇಶ್ ಭಟ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುವ ಅರ್ಷಿಯಾ ಖಾನ್, ಕದ್ರಿ ದೇವಾಲಯದ ಆವರಣದಲ್ಲಿರುವ ಕದಳಿ ಕಲಾ ಕೇಂದ್ರದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಯಕ್ಷಗಾನದ ಪ್ರಸಿದ್ಧ ಪ್ರಸಂಗಗಳಲ್ಲಿ ಒಂದಾದ 'ದೇವಿ ಮಹಾತ್ಮೆ'ಯಲ್ಲಿ ಈ ಹಿಂದೆ ಶುಂಭ, ನಿಶುಂಭ ಸೇರಿದಂತೆ ಖಳಪಾತ್ರಗಳನ್ನೂ, ಆದಿಮಾಯೆ ಮತ್ತು ಶ್ರೀದೇವಿಯ ಪಾತ್ರಗಳನ್ನೂ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಅಷ್ಟಭುಜೆಯಾಗಿ ಶ್ರೀದೇವಿಯ ಪಾತ್ರ ನಿರ್ವಹಿಸಿರುವುದು ಅವರ ಕಲಾಪಯಣದ ಗಮನಾರ್ಹ ಘಟ್ಟವಾಗಿದೆ.
ದೇವಿಯ ಪಾತ್ರಕ್ಕಾಗಿ ಕಟ್ಟುನಿಟ್ಟಿನ ವ್ರತಾಚರಣೆ : ಯಕ್ಷಗಾನದಲ್ಲಿ ಶ್ರೀದೇವಿಯಂತಹ ಪವಿತ್ರ ಪಾತ್ರವನ್ನು ನಿರ್ವಹಿಸುವುದು ಕಲಾವಿದರಿಗೆ ವಿಶೇಷ ಸಿದ್ಧತೆಯನ್ನು ಬೇಡುತ್ತದೆ. ಪಾತ್ರದ ಪಾವಿತ್ರ್ಯಕ್ಕೆ ತಕ್ಕಂತೆ ಅರ್ಷಿಯಾ ಖಾನ್ ಅವರು ಸಾತ್ವಿಕ ಸಸ್ಯಾಹಾರಿ ಆಹಾರ ಪದ್ಧತಿಯನ್ನು ಅನುಸರಿಸುವುದರೊಂದಿಗೆ ಕಟ್ಟುನಿಟ್ಟಿನ ವ್ರತಾಚರಣೆಯನ್ನೂ ಕೈಗೊಂಡಿದ್ದರು. ಈ ಅವಕಾಶವನ್ನು ತಾಯಿ ಉಳ್ಳಾಲ್ತಿ ದುರ್ಗಾಪರಮೇಶ್ವರಿಯ ಆಶೀರ್ವಾದವೆಂದು ಭಾವಿಸಿರುವ ಅವರು, ತಮ್ಮ ಮೇಲಿನ ಕಲಾಭಿಮಾನಿಗಳ ಪ್ರೀತಿ ಮತ್ತು ಶುಭಹಾರೈಕೆ ಸದಾ ಇರಲಿ ಎಂದು ಮನವಿ ಮಾಡಿದ್ದಾರೆ.
ದಸರಾ ಅಂಗವಾಗಿ ಕದಳಿ ಕಲಾ ಕೇಂದ್ರವು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ಅಕ್ಟೋಬರ್ 11ರಿಂದ 20ರವರೆಗೆ 14ನೇ ವರ್ಷದ 'ಕದಳಿ ದಶಾಹ' ಎಂಬ ಹತ್ತು ದಿನಗಳ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಕೊನೆಯ ದಿನವಾದ ಅಕ್ಟೋಬರ್ 20ರಂದು 'ಸಂಪೂರ್ಣ ಶ್ರೀ ದೇವಿ ಮಹಾತ್ಮೆ' ಪ್ರಸಂಗ ಪ್ರದರ್ಶನಗೊಂಡಿತು. ಕಟೀಲು, ಪಾವಂಜೆ ಸೇರಿದಂತೆ ತೆಂಕುತಿಟ್ಟಿನ ಪ್ರಸಿದ್ಧ ಮೇಳಗಳ ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅರ್ಷಿಯಾ ಖಾನ್ ಅವರು ಶ್ರೀದೇವಿಯಾಗಿ ರಂಗಸ್ಥಳದಲ್ಲಿ ಕಾಣಿಸಿಕೊಂಡು ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಿದರು. ಇನ್ನು ‘ದೇವಿ ಮಹಾತ್ಮೆ’ ಪ್ರಸಂಗದಲ್ಲಿ ದಾಯ್ಜಿವರ್ಲ್ಡ್ ನ ವೀಡಿಯೋ ಡಿವಿಷನ್ ನ ಮ್ಯಾನೇಜರ್ ವಿಲ್ಸನ್ ಸಲ್ದಾನ ಹಾಗೂ ಸಂಸ್ಥೆಯ ಸಿಬ್ಬಂದಿ ಸೌಮ್ಯ ಗುಡಿಗಾರ್ ಅವರು ವಿಶೇಷ ಪಾತ್ರದಲ್ಲಿ ಮಿಂಚಿದ್ದರು.
ಧರ್ಮದ ಗಡಿಗಳಾಚೆ ಬೆಳೆದ ಕರಾವಳಿಯ ಕಲೆ : ಯಕ್ಷಗಾನವೆಂದರೆ ಕರಾವಳಿಯ ಜನಜೀವನದ ಅವಿಭಾಜ್ಯ ಅಂಗ. ಜಾತಿ, ಧರ್ಮ, ಭಾಷೆ ಮತ್ತು ವರ್ಗಗಳ ಭೇದವಿಲ್ಲದೆ ಜನರನ್ನು ಒಂದೆಡೆ ಸೇರಿಸುವ ಶಕ್ತಿ ಈ ಕಲೆಯಲ್ಲಿದೆ. ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಪ್ರತೀಕವಾಗಿರುವ ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರದ ಮಹಿಮೆಯನ್ನು ಸಾರುವ 'ಬಪ್ಪನಾಡು ಕ್ಷೇತ್ರ ಮಹಾತ್ಮೆ' ಪ್ರಸಂಗವೂ ಕರಾವಳಿಯಲ್ಲಿ ಪ್ರಸಿದ್ಧವಾಗಿದೆ. ತೆಂಕುತಿಟ್ಟು ಮತ್ತು ಬಡಗುತಿಟ್ಟು ಯಕ್ಷಗಾನಗಳಲ್ಲಿ ಮುಸ್ಲಿಂ ಸಮುದಾಯದ ಕಲಾವಿದರು ಈಗಾಗಲೇ ತಮ್ಮ ಛಾಪು ಮೂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಷಿಯಾ ಖಾನ್ ಅವರ ಶ್ರೀದೇವಿ ಪಾತ್ರದ ಅಭಿನಯ ವಿಶೇಷ ಗಮನ ಸೆಳೆದಿದೆ. ಕಲೆಗೆ ಧರ್ಮದ ಗಡಿಗಳಿಲ್ಲ, ಪ್ರತಿಭೆಗೆ ಜಾತಿಯ ಮಿತಿಗಳಿಲ್ಲ ಎಂಬ ಸಂದೇಶವನ್ನು ಅವರ ಕಲಾಪಯಣ ಸಾರುತ್ತದೆ. ರಂಗಸ್ಥಳದಲ್ಲಿ ಅಷ್ಟಭುಜೆಯಾಗಿ ಮಿಂಚಿದ ಅರ್ಷಿಯಾ ಖಾನ್, ಕೇವಲ ಒಂದು ಪಾತ್ರವನ್ನು ನಿರ್ವಹಿಸಿಲ್ಲ, ಕರಾವಳಿಯ ಸೌಹಾರ್ದ ಪರಂಪರೆ ಮತ್ತು ಯಕ್ಷಗಾನದ ಸಾಂಸ್ಕೃತಿಕ ವೈಶಾಲ್ಯವನ್ನು ತಮ್ಮ ಅಭಿನಯದ ಮೂಲಕ ಅನಾವರಣಗೊಳಿಸಿದ್ದಾರೆ.