ಮಂಗಳೂರು,ಅ.17 (DaijiworldNews/AK): ಸೆಪ್ಟೆಂಬರ್ 30 ರಂದು ಮಂಗಳೂರಿನ MRPL ತೈಲ ಶುದ್ಧೀಕರಣ ಘಟಕದಲ್ಲಿ ಇತ್ತೀಚಿಗೆ ಸಂಭವಿಸಿದ್ದ ಭೀಕರ ಸ್ಫೋಟ ಮತ್ತು ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ಗುತ್ತಿಗೆ ಕಾರ್ಮಿಕರೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯನ್ನು ಸುರತ್ಕಲ್ನ ಇಡ್ಯಾ ಗ್ರಾಮದ ಕಾನಾ ನಿವಾಸಿ ರಾಜೇಶ್ ಡಿ’ಸಿಲ್ವಾ ಎಂದು ಗುರುತಿಸಲಾಗಿದೆ. ಹಲವಾರು ವರ್ಷಗಳಿಂದ ಎಂಆರ್ಪಿಎಲ್ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಶನಿವಾರ ಸಂಜೆ ಮರಣೋತ್ತರ ಪರೀಕ್ಷೆಗಾಗಿ ಅವರ ಶವವನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು, ನಂತರ ಅದನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬ್ಯಾಪ್ಟಿಸ್ಟ್ ಡಿ'ಸೋಜಾ ಅವರ ಐದು ಮಕ್ಕಳಲ್ಲಿ ರಾಜೇಶ್ ಒಬ್ಬರಾಗಿದ್ದರು. ಕುಟುಂಬದಲ್ಲಿ ರಾಜೇಶ್ ಸೇರಿದಂತೆ ಇಬ್ಬರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ. ರಾಜೇಶ್ ಅವಿವಾಹಿತರಾಗಿದ್ದರು ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 30 ರಂದು MRPL ನ 3 ನೇ ಹಂತದಲ್ಲಿರುವ ಕೋಕರ್ ಹೈಡ್ರೋ ಟ್ರೀಟಿಂಗ್ ಯೂನಿಟ್ (CHTU) ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ. ಹಳೆಯಂಗಡಿಯ ನಿವಾಸಿ ಮನೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ರಾಜೇಶ್ ಡಿ'ಸೋಜಾ ತೀವ್ರ ಸುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ, ರಾಜೇಶ್ ಶನಿವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಇದರೊಂದಿಗೆ ಈ ದುರಂತದಲ್ಲಿ ಮೃತರ ಒಟ್ಟು ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಇನ್ನು ಮೃತ ರಾಜೇಶ್ ಡಿ’ಸಿಲ್ವಾ ಅವರಿಗೆ 1.20 ಕೋಟಿ ರೂ. ಪರಿಹಾರ ಹಾಗೂ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು MRPL ಭರಿಸಿದೆ.