ಮಂಗಳೂರು, ನ 21 (DaijiworldNews/MB): ಕಟೀಲು ಮೇಳವನ್ನು ಸರಕಾರ ಸುಪರ್ದಿಗೆ ಪಡೆಯುವ ಕುರಿತ ವಿಚಾರಣೆಯ ಮಧ್ಯಂತರ ತೀರ್ಪು ಇಂದು ಪ್ರಕಟವಾಗಲಿದೆ. ಈ ಆದೇಶದ ಪ್ರಕಾರ ಈ ವರ್ಷದ ತಿರುಗಾಟ ಪ್ರಕ್ರಿಯೆ ನಡೆಯಬೇಕಾಗಿದೆ.

ಈಗಾಗಲೇ ನವೆಂಬರ್ 22ರಂದು ಕಟೀಲು ಮೇಳದ ತಿರುಗಾಟ ಆರಂಭವಾಗಲಿದೆ ಎಂದು ಕಟೀಲು ಮೇಳ ಪ್ರಕಟನೆ ಹೊರಡಿಸಿದೆ. ಆದರೆ ನ್ಯಾಯಾಲಯದ ತೀರ್ಪಿನ ನಂತರ ತಿರುಗಾಟದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಈ ವರ್ಷದಲ್ಲೇ ಏಲಂ ನಡೆಸಬೇಕೆಂದು ನ್ಯಾಯಾಲಯವು ಆದೇಶ ಮಾಡಿದ್ದಲ್ಲಿ ತಿರುಗಾಟವು ವಿಳಂಬವಾಗಬಹುದು.
ನ್ಯಾಯಾಧೀಶರು ಸರ್ಕಾರಿ ವಕೀಲರಲ್ಲಿ ಹಲವು ವಿಚಾರಗಳ ಕುರಿತು ಸ್ಪಷ್ಟನೆ ಕೇಳಿದ್ದು, ಮುಜರಾಯಿ ಆಯುಕ್ತರು ನೀಡಿದ್ದ ಆದೇಶದ ಕುರಿತು ಸಲ್ಲಿಸಲಾದ ಅಫಿಡವಿಟ್ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಮುಜರಾಯಿ ಆಯುಕ್ತರನ್ನೇ ಕರೆಸುವಂತೆ ನಿರ್ದೇಶನ ನೀಡಿದ್ದು,ಆಯುಕ್ತರು ಇಂದು ಕೋರ್ಟ್ಗೆ ಹಾಜರಾಗಲಿದ್ದಾರೆ.
ಈ ನಡುವೆ ವಿನೋದ ಕುಮಾರ್ ಬಜ್ಪೆ, ಐತಪ್ಪ ವಿ.ಟಿ., ರಾಜೇಶ್ ಗುಜರನ್, ಜಿ.ಕೆ.ಶ್ರೀನಿವಾಸ್ ಸಾಲಿಯಾನ್ ಮತ್ತು ರಮೇಶ್ ಕುಲಶೇಖರ ಎಂಬುವವರು ಸಂಚಾಲತ್ವಕ್ಕಾಗಿ ವಿಚಾರಣೆಯಲ್ಲಿ ಸೇರ್ಪಡೆ ಅರ್ಜಿ ಸಲ್ಲಿಸಿ, ಕಟೀಲು ಮೇಳಗಳನ್ನು ತಮಗೆ ವಹಿಸಿಕೊಟ್ಟಲ್ಲಿ ಕಲಾವಿದರಿಗೆ ನೀಡುವ ಸಂಭಾವನೆಯನ್ನು ಮೂರು ಪಟ್ಟು ಹೆಚ್ಚಿಸಲಾಗುವುದು, ಹಲವು ಯಕ್ಷಗಾನ ಮೇಳ ನಡೆಸಿದ ಅನುಭವ ನಮಗೆ ಇರುವುದರಿಂದ ಕಟೀಲು ಮೇಳಗಳನ್ನೂ ವಹಿಸಲು ಸಿದ್ಧ ಎಂದು ಹೇಳಿದ್ದು ಈ ಅರ್ಜಿ ಇನ್ನೂ ಸ್ವೀಕಾರಗೊಂಡಿಲ್ಲ.