ಉಡುಪಿ, ಅ 30 (DaijiworldNews/SM): ಅಧಿಕಾರ ಇಲ್ಲದ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಕಾಂಗ್ರೆಸ್ ನಾಯಕರನ್ನೇ ಬ್ಲಾಕ್ ಮೇಲ್ ಮಾಡಿ ವಿಪಕ್ಷ ನಾಯಕ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ನಲ್ಲಿ ಹಲವಾರು ಗುಂಪುಗಳಾಗಿವೆ. ಸಿದ್ದರಾಮಯ್ಯ ಬಣ, ಪರಮೇಶ್ವರ್ ಬಣ ಹಾಗೂ ಡಿಕೆಶಿ ಬಣ ಎಂಬುವುದಾಗಿ ಆಗಿದ್ದು, ಸಿದ್ದರಾಮಯ್ಯ ಮೇಲೆ ಪಕ್ಷಕ್ಕೆ ಹಿಡಿತವೇ ಇಲ್ಲದಂತಾಗಿದೆ. ಪಕ್ಷದಲ್ಲಿರುವವರು ಸಿದ್ದರಾಮಯ್ಯ ಅವರನ್ನು ಕೇಳದ ಕಾರಣ ಸಿದ್ದು ಬಾಯಿಗೆ ಬಂದದನ್ನು ಮಾತನಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಕಿಡಿಖಾರಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯವನ್ನು ಒಡೆಯುವ ಪ್ರಯತ್ನವನ್ನು ನಡೆಸಿದ್ದಾರೆ. ಅವರ ಐದು ವರ್ಷದ ಆಡಳಿತಾವಧಿಯಲ್ಲಿ ಜನ ಬೇಸತ್ತಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ಒಡೆಯುವ ಪ್ರಯತ್ನವನ್ನು ಅವರು ನಡೆಸಿದ್ದರು. ಮತ್ತೆ ಇದೇ ಹಾದಿಯಲ್ಲಿ ನಡೆಯಲು ಅವರು ಯತ್ನಿಸುತ್ತಿದ್ದಾರೆ. ಆದರೆ, ರಾಜ್ಯದ ಜನತೆ ಬುದ್ಧಿವಂತರು. ಸಿದ್ದರಾಮಯ್ಯನಂತಹವರ ಕುತಂತ್ರಕ್ಕೆ ರಾಜ್ಯದ ಜನ ಬಲಿಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.