ಉಡುಪಿ, ಅ.10 (DaijiworldNews/AK): ಕಾರ್ಕಳ ತಾಲೂಕಿನ ಕುಕ್ಕುಜೆಯಿಂದ ದನಗಳನ್ನು ಕದ್ದು ಮಾರಾಟಕ್ಕಾಗಿ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಹಿರಿಯಡ್ಕ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಪೊಲೀಸರು ನಾಲ್ಕು ದನಗಳನ್ನು ರಕ್ಷಿಸಿ, ಸಾಗಿಸಲು ಬಳಸುತ್ತಿದ್ದ ಗೂಡ್ಸ್ ಟೆಂಪೋವನ್ನು ವಶಪಡಿಸಿಕೊಂಡಿದ್ದಾರೆ.


ಬಂಧಿತ ಆರೋಪಿಗಳು ಕಾಪು ತಾಲೂಕಿನ ಕುರ್ಕಾಲು ಗ್ರಾಮದ ನಿವಾಸಿ ಅಬ್ದುಲ್ ಸತ್ತಾರ್ (54) ಮತ್ತು ಇನ್ನಂಜೆ ಗ್ರಾಮದ ನಿವಾಸಿ ಯೋಗೀಶ್ ನಾಯಕ್ (49) ಎಂದು ಗರುತಿಸಲಾಗಿದೆ.
ಪೊಲೀಸರ ಪ್ರಕಾರ, ಅಕ್ಟೋಬರ್ 9, 2026 ರಂದು ಸಂಜೆ 7.30 ರ ಸುಮಾರಿಗೆ, ಹರಿಖಂಡೆ ಕಡೆಯಿಂದ ಹಿರಿಯಡ್ಕ ಕಡೆಗೆ ನೋಂದಣಿ ಸಂಖ್ಯೆ KA 20 AA 5197 ಹೊಂದಿರುವ ಗೂಡ್ಸ್ ಟೆಂಪೋದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂದು ಸಿಬ್ಬಂದಿಗೆ ಮಾಹಿತಿ ದೊರಕಿದೆ. ಹಿರಿಯಡ್ಕ ಪೊಲೀಸ್ ಠಾಣೆ ಜಂಕ್ಷನ್ ಬಳಿ ಪೊಲೀಸರು ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.
ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮದ ಕೃಷ್ಣ ಪೂಜಾರಿ ಎಂಬುವವರ ಮನೆಯ ಬಳಿ ಮೇಯುತ್ತಿದ್ದ ದನಗಳನ್ನು ಆರೋಪಿಗಳು ಕಳ್ಳತನ ಮಾಡಿದ್ದರು. ಇವುಗಳನ್ನು ಮಾರಾಟಕ್ಕಾಗಿ ಕಸಾಯಿಖಾನೆಗೆ ಸಾಗಿಸುತ್ತಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ರಕ್ಷಿಸಲಾದ 4 ದನಗಳು (ಅಂದಾಜು ಮೌಲ್ಯ 20,000) ಮತ್ತು ಸಾಗಾಟಕ್ಕೆ ಬಳಸಲಾಗಿದ್ದ 3 ಲಕ್ಷ ಮೌಲ್ಯದ ಗೂಡ್ಸ್ ಟೆಂಪೋ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ದನಗಳ ಕುತ್ತಿಗೆ ಮತ್ತು ಕಾಲುಗಳನ್ನು ನೈಲಾನ್ ಹಗ್ಗದಿಂದ ಅಮಾನವೀಯವಾಗಿ ಕಟ್ಟಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಉಡುಪಿ ಉಪವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಬೆಳ್ಳಿಯಪ್ಪ ಮತ್ತು ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪಿಎಸ್ಐ ಪುನೀತ್ ಕುಮಾರ್ ಬಿಇ ಮತ್ತು ಇತರ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.