ಉಡುಪಿ, ಅ.06 (DaijiworldNews/AA): ಈಗಾಗಲೇ ಕಡಿಮೆ ಮಳೆಯಿಂದಾಗಿ ಸಂಕಷ್ಟದಲ್ಲಿರುವ ಉಡುಪಿ ಜಿಲ್ಲೆಯ ರೈತರಿಗೆ ಇದೀಗ ಕಪ್ಪು ತಲೆ ಹುಳು ಹಾಗೂ ಕೆಂಪು ಮೂತಿ ಹುಳುಗಳ ತೀವ್ರ ಬಾಧೆ ಮತ್ತಷ್ಟು ಸಂಕಷ್ಟ ತಂದಿದೆ.

ಕುಂದಾಪುರ ಮತ್ತು ಬೈಂದೂರು ಭಾಗದ ಹಲವೆಡೆ ತೆಂಗಿನ ಮರಗಳು ಈ ಕೀಟಗಳ ಉಪಟಳಕ್ಕೆ ತೀವ್ರವಾಗಿ ಹಾನಿಗೊಳಗಾಗಿವೆ. ತೆಂಗಿನ ಮರದ ಸುಳಿ ಹಾಗೂ ಎಳೆ ಗರಿಗಳನ್ನು ತಿಂದು ನಾಶಪಡಿಸುತ್ತಿರುವ ಈ ಕೀಟಗಳು ಸಂಪೂರ್ಣ ಮರವನ್ನೇ ಒಣಗಿಸುತ್ತಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕಳೆದ ವರ್ಷ ಜಿಲ್ಲೆಯಲ್ಲಿ ಸತತ ಮಳೆಯಾಗಿದ್ದರಿಂದ ತೆಂಗಿನ ಮರಗಳಿಗೆ ಕೀಟಬಾಧೆ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ, ಈ ಬಾರಿ ಕೀಟಗಳ ಹಾವಳಿ ಗಣನೀಯವಾಗಿ ಹೆಚ್ಚಾಗಿದೆ.
ಬೈಂದೂರು ತಾಲೂಕಿನ ಹಡವು ಗ್ರಾಮದ ಅತ್ತಿಕೋಣೆ, ಪಡುಕೋಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಪ್ಪು ತಲೆ ಹುಳುವಿನ ಬಾಧೆ ತೀವ್ರವಾಗಿದೆ. ಈಗಾಗಲೇ ತಜ್ಞರ ತಂಡವು ಕೀಟಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ರೈತರಿಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿದೆ.
ಏಪ್ರಿಲ್ ತಿಂಗಳಿನಲ್ಲೇ ತೆಂಗಿನ ಸಸಿಗಳಿಗೆ ಕೆಂಪು ಮೂತಿ ಹುಳುವಿನ ಬಾಧೆ ಪ್ರಾರಂಭವಾಗಿತ್ತು. ಆನಂತರವೂ ಸುದೀರ್ಘ ಕಾಲ ಒಣ ಹಾಗೂ ಬಿಸಿಲಿನ ವಾತಾವರಣ ಮುಂದುವರಿದಿದ್ದರಿಂದ ಕೀಟಗಳ ಹಾವಳಿ ಮತ್ತಷ್ಟು ಉಲ್ಬಣಗೊಂಡಿದೆ ಎಂದು ರೈತರು ತಿಳಿಸಿದ್ದಾರೆ.