ಬಂಟ್ವಾಳ, ಅ.06 (DaijiworldNews/TA): ಕುಕ್ಕಿಪ್ಪಾಡಿ ಗ್ರಾಮದ ಪೆಲತ್ತಬೆಟ್ಟುವಿನಲ್ಲಿ ಮನೆ ಕುಸಿದು ಸಂಕಷ್ಟದಲ್ಲಿದ್ದ ತಾಯಿ ಹಾಗೂ ಹೆಣ್ಣು ಮಗಳಿಗೆ ಹೊಸ ಸೂರು ಕಲ್ಪಿಸಲು ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘ ಮಾನವೀಯ ಹೆಜ್ಜೆ ಇಟ್ಟಿದೆ.


ಆರ್ಥಿಕ ಸವಾಲುಗಳ ನಡುವೆಯೂ ದಾನಿಗಳ ಸಹಕಾರದಿಂದ ಮನೆ ನಿರ್ಮಾಣ ಕೈಗೆತ್ತಿಕೊಂಡಿರುವ ಸಂಘದ ಸದಸ್ಯರು, ಕಳೆದ ಆರು ವಾರಗಳಿಂದ ಸ್ವತಃ ಶ್ರಮದಾನದ ಮೂಲಕ ಪಾಯದಿಂದ ಹಿಡಿದು ಗೋಡೆ ನಿರ್ಮಾಣದವರೆಗೆ ಕಾಮಗಾರಿ ನಡೆಸಿದ್ದಾರೆ. ಸದ್ಯ ಮನೆಗೆ ಹಂಚು ಹಾಸುವ ಕಾರ್ಯ ನಡೆಯುತ್ತಿದ್ದು, ಅಕ್ಟೋಬರ್ 4ರಂದು ಕುಲಾಲ ಸೇವಾದಳದ ಸದಸ್ಯರು ಸ್ಥಳಕ್ಕೆ ತೆರಳಿ ಬೆಳಗ್ಗೆಯಿಂದಲೇ ಬಿಸಿಲನ್ನು ಲೆಕ್ಕಿಸದೆ ಹಂಚುಗಳಿಗೆ ಬಣ್ಣ ಬಳಿದು, ಜೋಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಸೇವಾದಳದ ದಳಪತಿ ಚಂದ್ರಶೇಖರ ಶಿವಾಜಿನಗರ, ಪ್ರಮುಖರಾದ ಪುರುಷೋತ್ತಮ ಸೌತೆಬಳ್ಳಿ, ಯಾದವ ಅಗ್ರಬೈಲು, ಕವಿತಾ ಯಾದವ್ ಸೇರಿದಂತೆ ಹಲವು ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿ ನಿರ್ಮಾಣ ಕಾಮಗಾರಿಗೆ ವೇಗ ನೀಡಿದ್ದು, ಸಮಾಜ ಬಾಂಧವರ ಈ ನಿಸ್ವಾರ್ಥ ಸೇವೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.