ಪುತ್ತೂರು, ಅ.05 (DaijiworldNews/TA): ದಕ್ಷಿಣ ಕನ್ನಡ ಜಿಲ್ಲೆಯ ಜನರ ಬಹುದಿನಗಳ ಕನಸಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ವೇಗ ಸಿಕ್ಕಿದೆ. ಪುತ್ತೂರಿನಲ್ಲಿ ಅತ್ಯಾಧುನಿಕ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ ಬೆನ್ನಲ್ಲೇ, ಕಾಲೇಜು ಆರಂಭಿಸಲು ಅಗತ್ಯವಿರುವ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲಾಗಿದೆ. ಇದೇ ಅಕ್ಟೋಬರ್ 10ರಂದು ನ್ಯಾಷನಲ್ ಮೆಡಿಕಲ್ ಕಮಿಷನ್ಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ.

ತಾತ್ಕಾಲಿಕ ವ್ಯವಸ್ಥೆಯಡಿ ಪುತ್ತೂರಿನ ಸುಮಾರು 50 ವರ್ಷ ಹಳೆಯದಾದ ಹಳೆಯ ನ್ಯಾಯಾಲಯ ಕಟ್ಟಡದಲ್ಲೇ ಮೆಡಿಕಲ್ ಕಾಲೇಜಿನ ಮೊದಲ ಬ್ಯಾಚ್ ಆರಂಭಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ. ಆರಂಭಿಕ ಹಂತದಲ್ಲಿ 50 ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ರೂ. 549 ಕೋಟಿ ಅನುದಾನ, 300 ಹಾಸಿಗೆಗಳ ಆಸ್ಪತ್ರೆ : ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ರಾಜ್ಯ ಸರ್ಕಾರ ರೂ. 549 ಕೋಟಿ ಅನುದಾನ ಮೀಸಲಿಟ್ಟಿದೆ. ಇದರ ಜೊತೆಗೆ ವಿದ್ಯಾರ್ಥಿಗಳ ಪ್ರಾಯೋಗಿಕ ತರಬೇತಿಗೆ ಅಗತ್ಯವಿರುವ 300 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಪ್ರತ್ಯೇಕವಾಗಿ ರೂ. 182 ಕೋಟಿ ಅನುದಾನ ಒದಗಿಸಲಾಗಿದೆ. ಆಸ್ಪತ್ರೆ ನಿರ್ಮಾಣಕ್ಕೆ ನಿಗದಿಪಡಿಸಿರುವ ಸ್ಥಳದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಈಗಾಗಲೇ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಹಳೆಯ ಕೋರ್ಟ್ ಕಟ್ಟಡಕ್ಕೆ ಹೊಸ ರೂಪ : ಮೆಡಿಕಲ್ ಕಾಲೇಜಿನ ತರಗತಿಗಳನ್ನು ಶೀಘ್ರ ಆರಂಭಿಸುವ ಉದ್ದೇಶದಿಂದ ಪುತ್ತೂರಿನ ಹಳೆಯ ನ್ಯಾಯಾಲಯ ಕಟ್ಟಡವನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಸರ್ಕಾರಿ ಮೆಡಿಕಲ್ ಕಾಲೇಜಿನ ತಜ್ಞ ವೈದ್ಯರ ತಂಡ ಪುತ್ತೂರಿಗೆ ಭೇಟಿ ನೀಡಿ ಕಟ್ಟಡವನ್ನು ಪರಿಶೀಲಿಸಿದೆ. ಸುಮಾರು ರೂ. 5 ಕೋಟಿ ವೆಚ್ಚದಲ್ಲಿ ಹಳೆಯ ನ್ಯಾಯಾಲಯ ಕಟ್ಟಡವನ್ನು ನವೀಕರಿಸಿ, ಮೆಡಿಕಲ್ ಕಾಲೇಜಿಗೆ ಅಗತ್ಯವಿರುವ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಅನಾಟಮಿ, ಫಿಸಿಯಾಲಜಿ, ಬಯೋಕೆಮಿಸ್ಟ್ರಿ ಹಾಗೂ ಕಮ್ಯುನಿಟಿ ಮೆಡಿಸಿನ್ ಸೇರಿದಂತೆ ಪ್ರಮುಖ ವಿಭಾಗಗಳ ತರಗತಿಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ : ಮೆಡಿಕಲ್ ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಯೋಜನೆ ರೂಪಿಸಲಾಗಿದೆ. ಕಾಲೇಜಿನ ಸಮೀಪದಲ್ಲಿರುವ ಖಾಲಿ ಸರ್ಕಾರಿ ಕಟ್ಟಡಗಳನ್ನು ಹಾಸ್ಟೆಲ್ಗಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಇದರ ಜೊತೆಗೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪುತ್ತೂರು ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಹಳೆಯ ತಹಶೀಲ್ದಾರ್ ಕಟ್ಟಡವನ್ನು ಬಳಸಿಕೊಂಡು ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಕೂಡ ನಿರ್ಧರಿಸಲಾಗಿದೆ.
ಏಪ್ರಿಲ್ನಲ್ಲಿ ಮೊದಲ ಬ್ಯಾಚ್? : ತಾತ್ಕಾಲಿಕ ಮೂಲಸೌಕರ್ಯದ ಆಧಾರದ ಮೇಲೆ ದೇಶದ ಹಲವು ಕಡೆಗಳಲ್ಲಿ ಮೆಡಿಕಲ್ ಕಾಲೇಜುಗಳಿಗೆ NMC ಅನುಮತಿ ದೊರೆತಿರುವ ಮಾದರಿಯಲ್ಲೇ ಪುತ್ತೂರಿನಲ್ಲೂ ಕಾಲೇಜು ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಡಿಸೆಂಬರ್ನಲ್ಲಿ NMC ತಜ್ಞರ ತಂಡ ಪುತ್ತೂರಿಗೆ ಭೇಟಿ ನೀಡಿ ಕಾಲೇಜಿನ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಪರಿಶೀಲಿಸುವ ನಿರೀಕ್ಷೆಯಿದೆ. ಪರಿಶೀಲನೆ ವೇಳೆ ಯಾವುದೇ ಕೊರತೆ ಕಂಡುಬಂದರೆ ಅದನ್ನು ಸರಿಪಡಿಸಲು ಅವಕಾಶ ಸಿಗಲಿದೆ. ಎಲ್ಲವೂ ಯೋಜನೆಯಂತೆ ನಡೆದರೆ ಮುಂದಿನ ವರ್ಷದ ಏಪ್ರಿಲ್ನಲ್ಲಿ ಪುತ್ತೂರಿನ ಸರ್ಕಾರಿ ಮೆಡಿಕಲ್ ಕಾಲೇಜಿನ ಮೊದಲ ಬ್ಯಾಚ್ ತರಗತಿಗಳು ಆರಂಭವಾಗುವ ನಿರೀಕ್ಷೆಯಿದೆ.