ಉಡುಪಿ, ಅ.04 (DaijiworldNews/AA): ಮಲ್ಪೆಯ ಬಾಬುತೋಟ ಡಾಕ್ ಪ್ರದೇಶದಲ್ಲಿ ನಡೆದ ಗುಜರಿ ಸಂಗ್ರಹಕಾರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿ ಮೂಲದ ಆರೋಗ್ಯ ದಾಸ್ ಅಲಿಯಾಸ್ ಕಾಮಿ (55) ಬಂಧಿತ ಆರೋಪಿ.
ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶ ಮೂಲದ ಪರಮೇಶಿ ಅಲಿಯಾಸ್ ಪರಮ್ ವೇಲಿ ಎಂದು ಗುರುತಿಸಲಾಗಿದೆ. ಇವರು ಕಳೆದ ಮೂರು ವರ್ಷಗಳಿಂದ ಬಂದರು ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ಸಂಗ್ರಹಿಸುತ್ತಾ, ಮಲ್ಪೆ ಮೆರೈನ್ ಏಜೆನ್ಸಿ ಪಕ್ಕದ ಖಾಲಿ ಜಾಗದಲ್ಲಿ ವಾಸವಾಗಿದ್ದರು.
ದೂರಿನ ಪ್ರಕಾರ, ಏಜೆನ್ಸಿ ಮಾಲೀಕರು ಸೆಪ್ಟೆಂಬರ್ 28 ರಂದು ಸಂಜೆ 7 ಗಂಟೆಗೆ ಏಜೆನ್ಸಿಯನ್ನು ಮುಚ್ಚಿ ಮನೆಗೆ ತೆರಳಿದ್ದರು. ಸೆಪ್ಟೆಂಬರ್ 29 ರಂದು ಬೆಳಗ್ಗೆ ಸುಮಾರು 8:30 ಕ್ಕೆ ಅವರು ಮರಳಿ ಬಂದಾಗ, ಏಜೆನ್ಸಿಯ ಪಕ್ಕದ ಖಾಲಿ ಜಾಗದಲ್ಲಿ ಪರಮೇಶಿ ಅವರು ರಕ್ತದ ಮಡುವಿನಲ್ಲಿ ಗೋಣಿಚೀಲದ ಮೇಲೆ ಬಿದ್ದಿರುವುದು ಕಂಡುಬಂದಿದೆ. ಅವರ ಕುತ್ತಿಗೆಯ ಬಳಿಯ ಗಾಯದಿಂದ ರಕ್ತ ಹರಿಯುತ್ತಿತ್ತು.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 28 ರ ಸಂಜೆ 7 ರಿಂದ ಸೆಪ್ಟೆಂಬರ್ 29 ರ ಬೆಳಗ್ಗೆ 8:30 ರ ನಡುವೆ ಅಪರಿಚಿತ ವ್ಯಕ್ತಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಮೇಶಿ ಅವರನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 103 ರ ಅಡಿಯಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ (ಅಪರಾಧ ಸಂಖ್ಯೆ: 107/2026) ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಹುಬ್ಬಳ್ಳಿಯ ಹೊರವಲಯದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ ಉಪವಿಭಾಗದ ಪೊಲೀಸ್ ಅಧಿಕಾರಿ ಬೆಳ್ಳಿಯಪ್ಪ ಕೆ.ಯು. ಹಾಗೂ ಮಲ್ಪೆ ಸರ್ಕಲ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಡಿ, ಹೆಡ್ ಕಾನ್ಸ್ಟೇಬಲ್ಗಳಾದ ವಿಶ್ವನಾಥ್ ಮತ್ತು ಆದರ್ಶ್ ಹಾಗೂ ಕಾನ್ಸ್ಟೇಬಲ್ ಕುಬೇರ ಅವರನ್ನೊಳಗೊಂಡ ತಂಡ ಈ ಬಂಧನ ಕಾರ್ಯಾಚರಣೆಯನ್ನು ನಡೆಸಿದೆ.