ಮಂಗಳೂರು, ಅ.04 (DaijiworldNews/AA): "ಗುಣಮಟ್ಟದ ಆಹಾರ ನೀಡುವುದು ನಿಮ್ಮ ಪ್ರಾಥಮಿಕ ಕರ್ತವ್ಯ. ಕೇವಲ ಲಾಭದ ಆಸೆಗೆ ಬಿದ್ದು ಜನರ ಆರೋಗ್ಯದ ಜೊತೆ ಆಟವಾಡಬಾರದು" ಎಂದು ಪೇಯಿಂಗ್ ಗೆಸ್ಟ್(ಪಿಜಿ), ಹಾಸ್ಟೆಲ್ ಹಾಗೂ ಹೋಟೆಲ್ ಮಾಲೀಕರಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ಕಡಕ್ ಎಚ್ಚರಿಕೆ ನೀಡಿದ್ದಾರೆ.

ಹಾಸ್ಟೆಲ್ ಮತ್ತು ಪಿಜಿಗಳ ಮೇಲೆ ಅಧಿಕಾರಿಗಳು ನಡೆಸುತ್ತಿರುವ ಸಸತ ಪರಿಶೀಲನೆ ಹಾಗೂ ದಾಳಿ ಕುರಿತು ಶನಿವಾರ ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, "ಯಾವುದೇ ದೂರು ಬಂದರೂ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ತೆರಳಿ ಕೂಲಂಕುಷವಾಗಿ ತನಿಖೆ ನಡೆಸಲಿದ್ದಾರೆ ಎಂದರು. ಅಲ್ಲದೆ, ಸಾರ್ವಜನಿಕರು ಸುಲಭವಾಗಿ ದೂರು ನೀಡಲು ಮತ್ತು ನೆರವು ಪಡೆಯಲು 'ಕ್ಯೂಆರ್ ಕೋಡ್' ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ" ಎಂದು ಮಾಹಿತಿ ನೀಡಿದರು.
"ದೊಡ್ಡ ದೊಡ್ಡ ಆಸ್ಪತ್ರೆಗಳ ಕ್ಯಾಂಟೀನ್ಗಳಿಂದ ಹಿಡಿದು ಸಣ್ಣ ಹೋಟೆಲ್ಗಳು, ಪಿಜಿ ಹಾಗೂ ಹಾಸ್ಟೆಲ್ಗಳವರೆಗೆ ಎಲ್ಲಾ ಆಹಾರ ಸರಬರಾಜು ಕೇಂದ್ರಗಳಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ತನಿಖೆ ನಡೆಸಲಿದ್ದಾರೆ" ಎಂದು ಖಾದರ್ ಹೇಳಿದರು.
ಮುಂದುವರಿದು ಮಾತನಾಡಿದ ಅವರು, "ಸಾರ್ವಜನಿಕರು ಎಲ್ಲೇ ಕಳಪೆ ಅಥವಾ ನೈರ್ಮಲ್ಯ ರಹಿತ ಆಹಾರ ಕಂಡುಬಂದರೂ ದೂರು ನೀಡಬಹುದು. ಈ ದೂರುಗಳು ನೇರವಾಗಿ ಇಲಾಖೆಯ ಮೊಬೈಲ್ ವ್ಯವಸ್ಥೆಗೆ ತಲುಪುತ್ತವೆ. ದೂರು ಬಂದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ವಿವರವಾದ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ" ಎಂದು ಸ್ಪಷ್ಟಪಡಿಸಿದರು.