ಮಂಗಳೂರು, ಅ.04 (DaijiworldNews/AA): ಇಲ್ಲಿನ ಬಳ್ಳಾಲ್ಬಾಗ್ ಬಳಿಯ ಖಾಸಗಿ ಕಾಲೇಜೊಂದರ ಕ್ಯಾಂಟೀನ್ ಸಮೀಪ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಯ ಮೇಲೆ ಅದೇ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿ ಹಾಗೂ ಆತನ ಐವರು ಸಹಚರರು ಚಾಕುವಿನಿಂದ ಇರಿದ ಘಟನೆ ಶನಿವಾರ ಸಂಭವಿಸಿದೆ.

ದಾಳಿಗೊಳಗಾದ ವಿದ್ಯಾರ್ಥಿಯನ್ನು ಬೆಳ್ತಂಗಡಿಯ ಮಿತ್ತಬಾಗಿಲು ನಿವಾಸಿ, ಖಾಸಗಿ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿ ಮೊಹಮ್ಮದ್ ಉನೈಸ್ (20) ಎಂದು ಗುರುತಿಸಲಾಗಿದೆ. ಕಾಟಿಪಳ್ಳ ಮೂಲದ, ಅದೇ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿ ರಿಯಾನ್ ಹಾಗೂ ಆತನೊಂದಿಗೆ ಬಂದಿದ್ದ ಇತರ ಐದು ಮಂದಿ ಸಹಚಚರು ಈ ಕೃತ್ಯ ಎಸಗಿದ ಪ್ರಮುಖ ಆರೋಪಿಗಳಾಗಿದ್ದಾರೆ.
ಎಫ್ಐಆರ್ ಪ್ರಕಾರ, ಶನಿವಾರ ಬೆಳಗ್ಗೆ ಸುಮಾರು 11:30ಕ್ಕೆ ಉನೈಸ್ 'ಸಿಟಿ ಅರೇನಾ' ಟರ್ಫ್ನಲ್ಲಿ ಕಬಡ್ಡಿ ಆಡಲು ಹೋಗಿದ್ದಾಗ ಮೊದಲ ಗಲಾಟೆ ಸಂಭವಿಸಿದೆ. ಟರ್ಫ್ ಎದುರಿನ ರಸ್ತೆಯಲ್ಲಿ ಆತನ ಸ್ನೇಹಿತ ರಾಯೀಜ್ ಹಾಗೂ ಆರೋಪಿ ರಿಯಾನ್ ನಡುವೆ ಜಗಳ ನಡೆಯುತ್ತಿರುವುದನ್ನು ಗಮನಿಸಿದ ಉನೈಸ್ ಮತ್ತು ಇತರ ವಿದ್ಯಾರ್ಥಿಗಳು ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದಾರೆ. ಈ ವೇಳೆ ರಿಯಾನ್, ಉನೈಸ್ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದ ಎನ್ನಲಾಗಿದೆ.
ಬಳಿಕ ಮಧ್ಯಾಹ್ನ ಸುಮಾರು 1:45 ರ ವೇಳೆಗೆ ಉನೈಸ್ ಮತ್ತು ಆತನ ಸ್ನೇಹಿತರು ಕಾಲೇಜು ಕ್ಯಾಂಟೀನ್ ಬಳಿ ನಿಂತಿದ್ದಾಗ, ರಿಯಾನ್ ಹಾಗೂ ಆತನ ಐವರು ಸಹಚರರು ಎರಡು ದ್ವಿಚಕ್ರ ವಾಹನಗಳಲ್ಲಿ ಸ್ಥಳಕ್ಕೆ ಬಂದಿದ್ದಾರೆ. ಉನೈಸ್ನನ್ನು ಸುತ್ತುವರಿದ ಆರೋಪಿಗಳು, ಕೊಲೆ ಬೆದರಿಕೆ ಹಾಕಿ ಏಕಾಏಕಿ ದಾಳಿ ನಡೆಸಿದ್ದಾರೆ. ಚಾಕುವಿನಿಂದ ಉನೈಸ್ನ ತಲೆ, ಬೆನ್ನು, ಎಡಕವಿ ಹಾಗೂ ದೇಹದ ಇತರ ಭಾಗಗಳಿಗೆ ಇರಿದಿದ್ದು, ತೀವ್ರ ರಕ್ತಸ್ರಾವ ಉಂಟಾಗಿದೆ.
ದಾಳಿಯ ನಂತರ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣವೇ ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳು ನೀಡಿದ ದೂರಿನ ಆಧಾರದ ಮೇಲೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅಪರಾಧ ಸಂಖ್ಯೆ: 88/2026) ದಾಖಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಾಯ್ದೆಯ ಸೆಕ್ಷನ್ 109, 118(1), 115(2), 189(2), 189(4) ಹಾಗೂ 191(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.