ಸುಳ್ಯ, ಅ.04 (DaijiworldNews/TA): ಕನಕಮಜಲು ಬಳಿ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ 60 ವರ್ಷದ ಪಾದಚಾರಿ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಕನಕಮಜಲು ಗ್ರಾಮದ ಮೂರ್ಜೆ ನಿವಾಸಿ ಪದ್ಮಾವತಿ (60) ಎಂದು ಗುರುತಿಸಲಾಗಿದೆ.

ಸೆಪ್ಟೆಂಬರ್ 30ರಂದು ಈ ಅಪಘಾತ ಸಂಭವಿಸಿತ್ತು. ಪದ್ಮಾವತಿ ಅವರು ಕನಕಮಜಲು ಪಟ್ಟಣದ ಅಂಗಡಿಯೊಂದಕ್ಕೆ ತೆರಳಿದ್ದರು. ಬಳಿಕ ಸಂಜೆ ರಸ್ತೆ ದಾಟಲು ಕಾಯುತ್ತಾ ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಪುತ್ತೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಸರಕು ಸಾಗಣೆ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪದ್ಮಾವತಿ ರಸ್ತೆಗೆ ಬಿದ್ದಿದ್ದು, ತಲೆಯ ಹಿಂಭಾಗ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದವು. ಸ್ಥಳೀಯರು ಕೂಡಲೇ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 3ರಂದು ಶನಿವಾರ ಅವರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸರಕು ಸಾಗಣೆ ವಾಹನದ ಚಾಲಕ ಮಹಾಬಲ ಪೂಜಾರಿ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.