ಮಂಗಳೂರು, ಅ.03 (DaijiworldNews/AK): ಮಂಗಳೂರಿನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಕರಾವಳಿ ಸಂಚಾರಿ ಪೀಠ ಸ್ಥಾಪನೆಗೆ ಸಂಬಂಧಿಸಿ ಅಕ್ಟೋಬರ್ 12ರಂದು ಪೂರ್ವಾಹ್ನ 11:30ಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಹೈಕೋರ್ಟ್ ಸಂಚಾರಿ ಪೀಠ ಹೋರಾಟ ಸಮಿತಿಯ ಸಂಚಾಲಕ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಯಾವುದೇ ರಾಜಕೀಯ ಪಕ್ಷಪಾತವಿಲ್ಲದೆ ಒಗ್ಗಟ್ಟಿನಿಂದ ಕರಾವಳಿಗೆ ಹೈಕೋರ್ಟ್ ಪೀಠದ ಅಗತ್ಯವನ್ನು ಪ್ರತಿಪಾದಿಸಲಾಗುವುದು ಎಂದು ಹೇಳಿದರು.
ಕರಾವಳಿ ಕರ್ನಾಟಕ ಭಾಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಅಥವಾ ಶಾಶ್ವತ ಪೀಠ ಸ್ಥಾಪನೆಯ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ವರದಿ ನೀಡಲು ಹೈಕೋರ್ಟ್ ನ ಮೂವರು ನ್ಯಾಯಮೂರ್ತಿಗಳ ಸಮಿತಿ ಅ.18ರ ಬಳಿಕ ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದ್ದು, ಇದಕ್ಕೂ ಮೊದಲು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಅ.12ರಂದು ಮಧ್ಯಾಹ್ನ 11:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದೆ.
ತುಳು ಭಾಷೆಗೆ ಅಧಿಕೃತ ಸ್ಥಾನಮಾನದ ಹೋರಾಟದಂತೆ, ಕರಾವಳಿ ಭಾಗದ ಎಲ್ಲ ಶಾಸಕರು, ಸಂಸದರು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಬೆಂಬಲ ನೀಡಬೇಕು ಎಂದು ಐವನ್ ಡಿಸೋಜ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ನ್ಯಾಯವಾದಿ ಎಂ.ಪಿ. ನರೋನ್ನ, ಉಡುಪಿ ಬಾರ್ ಎಸೋಸಿಯೇಶನ್ ಅಧ್ಯಕ್ಷ ರೊನಾಲ್ಡ್ ಪ್ರವೀಣ್, ಮಂಗಳೂರು ಬಾರ್ ಎಸೋಸಿಯೇಶನ್ ಮಾಜಿ ಅಧ್ಯಕ್ಷ ರಾಘವೇಂದ್ರ ರಾವ್, ಉಡುಪಿ ವಕೀಲರ ಸಂಘದ ಸದಸ್ಯ ಆದಿತ್ಯ ಮತ್ತಿತರರು ಇದ್ದರು.